ನಟ ದೊಡ್ಡಣ್ಣನ ಅಳಿಯ ವೀರೇಂದ್ರ ಮೇಲೆ 420 ಕೇಸ್ ದಾಖಲು

k c nagendra
Advertisement

ದಾವಣಗೆರೆ: ಚಿತ್ರನಟ ದೊಡ್ಡಣ್ಣನ ಅಳಿಯ, ಜೆಡಿಎಸ್ ಪಕ್ಷದ ಚಿತ್ರದುರ್ಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿ ಮೇಲೆ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮತ್ತು ಗೋವಾದಲ್ಲಿ ಕ್ಯಾಸಿನೋ ದಂಧೆ ಮಾಡಿರುವ ಆರೋಪದ ಅಡಿಯಲ್ಲಿ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ 420 ಪ್ರಕರಣ ದಾಖಲಾಗಿದೆ.
ವೀರೇಂದ್ರ ಚಿತ್ರದುರ್ಗ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಪಪ್ಪಿ ವೀರೇಂದ್ರ ಕಳೆದ ಬಾರಿಯೂ ಜೆಡಿಎಸ್ ಅಭ್ಯರ್ಥಿಯಾಗಿ ಚಿತ್ರದುರ್ಗದಿಂದ ಸ್ಪರ್ಧೆ ಮಾಡಿದ್ದರು. ವೀರೇಂದ್ರ ಅವರೊಂದಿಗೆ ದಾವಣಗೆರೆಯ ಕಿರಣ್, ಚೇತನ್, ಸೂರಜ್ ಕುಟ್ಟಿ, ವಿರುದ್ಧವು ದೂರು ದಾಖಲಾಗಿದ್ದು, ವೆಂಕಟೇಶ್ ಎಂಬುವವರು ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ಮಾಡಿದ್ದರು. ಪಂದ್ಯ ಅಕ್ಟೋಬರ್ 20ರಂದು ನಡೆದಿತ್ತು. ಕ್ರಿಕೆಟ್ ಬೆಟ್ಟಿಂಗ್ ಆಸೆ ಹುಟ್ಟಿಸಿ ಮೊಬೈಲ್ ಆಪ್ ಮೂಲಕ ಹಣ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಕಿರಣ್, ಚೇತನ್‌ನನ್ನು ಬಂಧಿಸಿ 7 ಲಕ್ಷ ವಶಕ್ಕೆ ಪಡೆದಿದ್ದು, ಸೂರಜ್ ಕುಟ್ಟಿ ಮತ್ತು ವೀರೇಂದ್ರ ಪಪ್ಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೆ.ಸಿ.ವೀರೇಂದ್ರ ಪಪ್ಪಿ ಬ್ಯಾಂಕ್ ಖಾತೆ ಸೀಜ್ ಆಗಿದ್ದು, ಚಳ್ಳಕೆರೆ ಕೆನರಾ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್‌ಗಳ ಅಕೌಂಟ್ ಸೀಜ್ ಮಾಡಲಾಗಿದೆ. ಯಾವುದೇ ಏರ್ ಫೋರ್ಟ್‌ಗೆ ಬಂದರೂ ತಕ್ಷಣ ಬಂಧಿಸಲು ಸೂಚನೆ ನೀಡಿದೆ. ಸ್ಥಳೀಯ ನ್ಯಾಯಾಲಯದಲ್ಲಿ ಈಗಾಗಲೇ ಜಾಮೀನು ನಿರಾಕರಣೆ ಮಾಡಲಾಗಿದ್ದು, ವೀರೇಂದ್ರ ಅಲಿಯಾಸ್ ಪಪ್ಪಿ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.