ಧ್ರುವನಾರಾಯಣ ನಿಧನಕ್ಕೆ ಸಿದ್ಧರಾಮಯ್ಯ ಕಂಬನಿ

ಸಿದ್ದರಾಮಯ್ಯ
Advertisement

ದಾವಣಗೆರೆ: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿಧನಕ್ಕೆ ವಿಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ. ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ್ದ ಸಿದ್ದರಾಮಯ್ಯ ನಗರದಲ್ಲಿಯೇ ತಂಗಿದ್ದರು. ಬೆಳಿಗ್ಗೆ ಹರಿಹರಕ್ಕೆ ಹೋಗಬೇಕಿತ್ತು. ಆದರೆ, ಧ್ರುವನಾರಾಯಣ ಅವರ ನಿಧನ ಸುದ್ದಿ ತಿಳಿದು, ಪ್ರಜಾಧ್ವನಿ ಕಾರ್ಯಕ್ರಮ ರದ್ದುಗೊಳಿಸಿ ಮೈಸೂರಿಗೆ ತೆರಳಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧ್ರುವನಾರಾಯಣ್ ಪಾದರಸದಂತೆ ಕೆಲಸ ಮಾಡುತ್ತಿದ್ದರು. ಅವರ ಸಾವು ನನಗೆ ಅಷ್ಟೇ ಅಲ್ಲ, ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ತುಂಬಲಾರದ ನಷ್ಟವಾಗಿದೆ ಎಂದ ಅವರು, ಧ್ರುವನಾರಾಯಣ ಅವರೊಂದಿಗಿನ ಒಡನಾಟ ನೆನೆದು, ವಿಧಿ ಆಟದ ಮುಂದೆ ನಾವು ಯಾರೂ ಆಡೋಕೆ ಆಗಲ್ಲ ಎನ್ನುತ್ತ ಭಾವುಕರಾದರು.
ಧ್ರುವನಾರಾಯಣ ಕಾಂಗ್ರೆಸ್‌ನಲ್ಲಿ ಎನ್‌ಎಸ್‌ಯು ಐ ನಿಂದ ಬಂದು ವಿಧಾನಸಭೆ ಹಾಗೂ ಸಂಸತ್ತಿಗೆ ಹೋದವರು. ಎರಡು ಬಾರಿ ಶಾಸಕರಾದವರು. ಎರಡು ಬಾರಿ ಲೋಕಸಭಾ ಸದಸ್ಯರಾಗಿ ಕೆಲಸ ಮಾಡಿದ್ದರು. ಸಂಸತ್ತಿನಲ್ಲಿ ಕೆಲವೇ ಕೆಲವು ಉತ್ತಮ ಲೋಕಸಭೆ ಸದಸ್ಯರಿಲ್ಲ ಇವರೂ ಒಬ್ಬರಾಗಿದ್ದರು. ಅವರನ್ನು ನಾವು ನಂಬರ್ ಒನ್ ಲೋಕಸಭೆ ಸದಸ್ಯ ಎಂದು ಕರೆಯುತ್ತಿದ್ದೆವು. ದಣಿವರಿಯದಂತೆ ಧ್ರುವನಾರಾಯಣ ಕೆಲಸ ಮಾಡುತ್ತಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಚುನಾವಣೆ ಸಂದರ್ಭದಲ್ಲಿ ರಾಜ್ಯಾದ್ಯಂತ ತೊಡಗಿಸಿಕೊಂಡಿದ್ದರು. ಅಭ್ಯರ್ಥಿ ಆಯ್ಕೆಯಲ್ಲೂ ತೊಡಗಿಸಿಕೊಂಡಿದ್ದರು. ಅವರಿಗೆ ಭಾರವಾದ ಮನಸ್ಸಿನಿಂದ ಸಂತಾಪ ಸೂಚಿಸುತ್ತೇನೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಿದ್ಧರಾಮಯ್ಯ ಸಂತಾಪ ವ್ಯಕ್ತಪಡಿಸಿದರು.