ದಾವಣಗೆರೆ: ಬಿಜೆಪಿ ಪಕ್ಷಕ್ಕಾಗಿ ಸತತ ೩೨ ವರ್ಷಗಳಿಂದ ಕಾರ್ಯಕರ್ತರಾಗಿ ದುಡಿದ ವಕೀಲ ಹಾಗೂ ಬಿಜೆಪಿ ಮುಖಂಡ ಎ. ವೈ. ಪ್ರಕಾಶ್ ಅವರಿಗೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷದ ಅವಧಿಯವರೆಗೆ ಹಾಗೂ ಸರ್ಕಾರದ ಮುಂದಿನ ಆದೇಶ ಬರುವವರೆಗೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸತೀಶ್ ಕಬಾಡಿ ಅಧಿಸೂಚನೆ ಹೊರಡಿಸಿದ್ದಾರೆ.
ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಹುದ್ದೆ ನೀಡಬೇಕೆಂಬ ಚರ್ಚೆ ಬಿಜೆಪಿ ಪಕ್ಷದಲ್ಲಿ ಈಗಾಗಲೇ ಆಗಿತ್ತು. ಕೇಂದ್ರ, ರಾಜ್ಯ ಮಟ್ಟದಲ್ಲಿಯೂ ಸುದೀರ್ಘವಾಗಿ ಚರ್ಚೆ ನಡೆದಿದೆ. ಇದರ ಆಧಾರದ ಮೇಲೆ ಬಿಜೆಪಿಗೆ ದುಡಿದಿರುವ ಪ್ರಕಾಶ್ ಅವರ ಹೆಸರು ದೂಡಾ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಕೇಳಿ ಬಂದಿತ್ತು. ಈಗ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಕೆ.ಎಂ. ಸುರೇಶ್ ಅವರು ತಮ್ಮ ಅವಧಿ ಮುಗಿದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈಗ ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದ್ದು, ಚುನಾವಣೆ ನಡೆದು ಸರ್ಕಾರ ರಚಿಸುವವರೆಗೂ ಪ್ರಕಾಶ್ ಅವರು ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.