ಹುಬ್ಬಳ್ಳಿ: ಬೆಳಿಗ್ಗೆ ಜಗದೀಶ ಶೆಟ್ಟರ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಶಿರಸಿಗೆ ತೆರಳುತ್ತಿದ್ದಂತೆಯೇ ಇತ್ತ ಆದರ್ಶನಗರದಲ್ಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ದೌಡಾಯಿಸಿದರು.
ಶೆಟ್ಟರ್ ಅವರಿಂದ ಪಕ್ಷಕ್ಕೆ ಆಗಬಹುದಾದ ಡ್ಯಾಮೇಜ್ ಕಂಟ್ರೋಲಗೆ ತಂತ್ರ ಹೆಣೆದರು ಎನ್ನಲಾಗಿದೆ. ಸುಮಾರು ಒಂದು ತಾಸು ಮಾತು ಕತೆ ನಡೆಸಿದ ನಾಯಕರು ಯುದ್ಧೋಪಾದಿಯಲ್ಲಿ ಡ್ಯಾಮೇಜ್ ಕಂಟ್ರೋಲ್ ಕ್ರಮಗಳನ್ನು ಜಾರಿಗೆ ತರಲು ನಿರ್ಧಾರ ಕೈಗೊಂಡರೆನ್ನಲಾಗಿದೆ.
ಇದರ ಆರಂಭವೇ ಮಾಜಿ ಸಿಎಂ ಯಡಿಯೂರಪ್ಪ ತರಾತುರಿಯಲ್ಲಿ ಕರೆದ ಪತ್ರಿಕಾಗೋಷ್ಠಿ ಎಂದು ಮೂಲಗಳಿಂದ ತಿಳಿದಿದೆ.
ಬೊಮ್ಮಾಯಿ ಅವರ ಮನೆಯಿಂದಲೇ ಯಡಿಯೂರಪ್ಪಗೆ ಕರೆ ಮಾಡಿದ ಧರ್ಮೇಂದ್ರ ಪ್ರಧಾನ್ ಒಂದು ಗಂಟೆಯೊಳಗೆ ನೀವು ಶೆಟ್ಟರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ಪ್ರಕಟಿಸಬೇಕು. ನೀವು ಲಿಂಗಾಯತ ಸಮುದಾಯದ ನಾಯಕರು. ಪಕ್ಷ ಬಿಟ್ಟು ಹೋದವರು ಲಿಂಗಾಯತ ಸಮುದಾಯದವರೇ. ಆ ಸಮುದಾಯದ ಹಿರಿಯರಾದ ನೀವೇ ತಿಳಿಗೊಳಿಸಬೇಕು. ನಮ್ಮ ಪಕ್ಷ ಶೆಟ್ಟರಗಾಗಿ ಏನೇನು ನೀಡಿದೆ. ಹೇಗೆ ನಡೆಸಿಕೊಂಡು ಬಂದಿದೆ ಎಂಬುದು ನಿಮಗೆಲ್ಲ ಗೊತ್ತಿರುವುದೇ. ಆ ವಿಚಾರವಳನ್ನೆಲ್ಲ ಬಯಲು ಮಾಡಿ ಎಂದು ಪ್ರಧಾನ್ ಯಡಿಯೂರಪ್ಪಗೆ ತಾಕೀತಿನ ಧ್ವನಿಯಲ್ಲಿ ಸೂಚಿಸಿದರನ್ನೆಲಾಗಿದೆ. ಹೀಗಾಗಿ ತರಾತುರಿಯಲ್ಲಿ ಯಡಿಯೂರಪ್ಪ ಶೆಟ್ಟರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಸ್ವಯಂ ಇಚ್ಛೆಯಿಂದ ಗೋಷ್ಠಿ ನಡೆಸಿಲ್ಲ. ಪಕ್ಷದ ಹೈಕಮಾಂಡ್ ರಿಮೋಟ್ ಕಂಟ್ರೋಲ್ ನಿಂದ ನಡೆಸಿದ್ದಾರೆ ಎಂದು ಶೆಟ್ಟರ ಆಪ್ತ ವಲಯ ಕೇಳಿ ಬಂದಿರುವ ಆರೋಪ.