ಧರ್ಮದಿಂದ ಜನ್ಮ ಪಾವನ-ಸಂಸ್ಕಾರಕ್ಕಾಗಿ ಬದುಕಾಗಲಿ: ಚಿಕ್ಕರೇವಣಸಿದ್ಧ ಜಗದ್ಗುರು

Advertisement

ಬಾಗಲಕೋಟೆ(ರಬಕವಿ-ಬನಹಟ್ಟಿ): ಧರ್ಮವಿಲ್ಲದ ಬದುಕು ಪಶುವಿಗೆ ಸಮಾನ. ಧರ್ಮದಿಂದ ಜನ್ಮ ಪಾವನ, ಧರ್ಮ ನಮ್ಮನ್ನು ಕಪಾಡುವುದಷ್ಟೇಯಲ್ಲದೆ ಕರ್ತವ್ಯ, ಧನ, ಭೂಮಿಗಾಗಿ ಬದುಕುವ ಬದಲು ಸಂಸ್ಕಾರಕ್ಕಾಗಿ ಬದುಕು ನಡೆಸಿದ್ದಲ್ಲಿ ಸಾರ್ಥಕ ಜೀವನವೆಂದು ಶ್ರೀ ಚಿಕ್ಕರೇವಣಸಿದ್ಧ ಜಗದ್ಗುರುಗಳು ಹೇಳಿದರು.
ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಜರುಗಿದ ದೇವರ ದಾಸಿಮಯ್ಯ ಹಟಗಾರ ಸಮಾಜದ ಜಗದ್ಗುರುಗಳಾಗಿ ಪೀಠಾರೋಹಣ ಸ್ವೀಕರಿಸಿ ಮಾತನಾಡಿದ ಅವರು, ಒಗ್ಗಟ್ಟಿನಿಂದ ಎಲ್ಲವೂ ಸಾಧ್ಯ. ವಿಭಜನೆಯಾಗದೆ, ಬೇರ್ಪಡೆಯಾಗದೆ ಸಮಾನ ಮನಸ್ಕ ರೀತಿಯಲ್ಲಿ ಹಟಗಾರ ಸಮುದಾಯದ ಏಳ್ಗೆಗೆ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಸದ್ಗುಣಗಳ ಅಡಿಪಾಯದೊಂದಿಗೆ ಸದ್ವಿಚಾರಗಳೊಂದಿಗೆ ಪ್ರತಿಯೊಬ್ಬ ಮನುಷ್ಯ ಮುನ್ನೆಡೆದಲ್ಲಿ ಸುಂದರ ಬದುಕು ನಿರ್ಮಾಣವಾಗುವುದೆಂದು ಜಗದ್ಗುರುಗಳು ಹೇಳಿದರು.
ಇದಕ್ಕೂ ಕೆಎಚ್‌ಡಿಸಿ ಕಾಲನಿಯ ದೇವರದಾಸಿಮಯ್ಯ ದೇವಸ್ಥಾನದ ಗೋಪುರ ಕಟ್ಟಡದ ಪೂಜಾ ಸಮಾರಂಭ ಹಾಗೂ ಜಗದ್ಗುರುಗಳ ವಿಶ್ರಾಂತಿ ಧಾಮ ಕಟ್ಟಡದ ಶಂಕುಸ್ಥಾಪನೆ ನೆರವೇರಿತು. ಇದೇ ಸಂದರ್ಭ ಶ್ರೀಗಳ ತುಲಾಭಾರ ಕಾರ್ಯಕ್ರಮವು ಹುಲ್ಯಾಳ ಗ್ರಾಮದ ಜನತೆಯಿಂದ ಜರುಗಿತು.