ಧಮ್ಕಿ ಹಾಕುವುದು ಡಿಕೆಶಿ, ಸಿದ್ದರಾಮಯ್ಯರ ಸಂಸ್ಕೃತಿ

ಪ್ರಲ್ಹಾದ್ ಜೋಶಿ
Advertisement

ಹುಬ್ಬಳ್ಳಿ: ಧಮ್ಕಿ ಹಾಕುವುದು ಡಿ.ಕೆ. ಶಿವಕುಮಾರ ಹಾಗೂ ಹೊಡೆಯುವುದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಂಸ್ಕೃತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಗಳಿಗೆ ಧಮ್ಕಿ ಹಾಕಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರ ಆರೋಪ ಬಾಲಿಶ್ ಆಗಿದೆ. ಸಾಂಸ್ಕೃತಿಕ, ಭಾರತೀಯ ಹಿಂದೂ ಸಂಸ್ಕೃತಿ ಬಿಜೆಪಿ ಪಾಲಿಸಿಕೊಂಡು ಬಂದಿದೆ ಎಂದರು.
ಪಂಚಮಸಾಲಿ ಸಮುದಾಯದ ಹೋರಾಟ ಮುಂದುವರಿಸುವ ಯೋಚನೆ ಕಾಂಗ್ರೆಸ್‌ನವರದಾಗಿತ್ತು. ಈಗ ಬಿಜೆಪಿ ಸರ್ಕಾರ ಎಲ್ಲ ಮೀಸಲಾತಿ ಸಮಸ್ಯೆ ಪರಿಹರಿಸಿ ತಾರ್ಕಿಕ ಅಂತ್ಯ ಹಾಡಿದೆ. ಡಿ.ಕೆ.‌ಶಿವಕುಮಾರ ಸಂಸ್ಕೃತಿ ಗುಂಡಾ ಸಂಸ್ಕೃತಿಯಾಗಿರುವುದು ಜಗತ್ತಿಗೆ ಗೊತ್ತಿದೆ ಎಂದು ಕುಟುಕಿದರು.
ಕಾಂಗ್ರೆಸ್‌ನವರು ಮಾಡುತ್ತಿರುವ ಆರೋಪ‌ ಶ್ರೀಗಳಿಗೆ ಮಾಡುತ್ತಿರುವ ಅಪಮಾನವಾಗಿದೆ ಎಂದರು.
ಒಕ್ಕಲಿಗ ಸಮಾಜಕ್ಕೆ‌ ಮೀಸಲಾತಿ ನೀಡಿರುವುದು ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಸಹಮತವಿಲ್ಲ ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಪಂಚಮಸಾಲಿ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಅವರು ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು‌ ಮಾತ್ರ ಮಾಡುತ್ತಿದ್ದರು. ಇದರ ಅರ್ಥ ಅವರ ಬದ್ಧತೆ ಇರಲಿಲ್ಲ. ಸದಾಶಿವ ಆಯೋಗ ಒಪ್ಪವಂತಹ, ಸಮಸ್ಯೆ ಬಗೆ ಹರಿಸುವ ತಾಕತ್ತು ಇರಲಿಲ್ಲ. ತಮ್ಮ ಕಾಲದಲ್ಲಿ ಅವೈಜ್ಞಾನಿಕವಾಗಿ ಮೀಸಲಾತಿ ನೀಡಿದ್ದರು. ಧರ್ಮದ ಆಧಾರ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನಿರ್ಣಯವಾಗಿದೆ. ಬಿಜೆಪಿ ನಿರ್ಣಾಯಕ ಸರ್ಕಾರವಾಗಿದೆ. ನಮ್ಮ ಪಕ್ಷದ ಬದ್ಧತೆ ಸ್ಪಷ್ಟವಾಗಿದೆ ಎಂದು ಹೇಳಿದರು.