ದ್ವಿತೀಯ ಸ್ತರದ ನಗರಗಳ ಅಭಿವೃದ್ಧಿಗೆ ಕೇಂದ್ರ ಬದ್ಧ

ಪ್ರಹ್ಲಾದ ಜೋಶಿ
Advertisement

ಹುಬ್ಬಳ್ಳಿ: ದೇಶದ ದ್ವಿತೀಯ ಸ್ತರದ ನಗರಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಡೆನಿಸನ್ಸ್ ಹೊಟೇಲ್‌ನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್, ಸ್ಟಾರ್ಟಪ್ ಕರ್ನಾಟಕ, ಕೆ-ಟೆಕ್ ಸಹಯೋಗದಲ್ಲಿ ನಡೆದ ‘ಬಿಯಾಂಡ್ ಬೆಂಗಳೂರು ಟೆಕ್ಸಲರೇಶನ್’ ಉದ್ಘಾಟಿಸಿ ಮಾತನಾಡಿದರು.
ಮಹಾನಗರಗಳ ಮೇಲಿನ ಒತ್ತಡ ಕಡಿಮೆ ಮಾಡುವ ದಿಸೆಯಲ್ಲಿ ದ್ವಿತೀಯ ಸ್ತರದ ನಗರಗಳನ್ನು ಬೆಳೆಸಬೇಕಿದೆ. ಈ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ ಪೂರಕ ವಾತಾವರಣ ಸೃಷ್ಟಿಸಬೇಕಿದೆ ಎಂದರು.
ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಉದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಆರಂಭಕ್ಕೆ ಪ್ರಯತ್ನ ನಡೆದಿದ್ದು, ಅದು ಶೀಘ್ರದಲ್ಲಿಯೇ ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ. ಬೇಲೆಕೇರಿ ನೈಸರ್ಗಿಕ ಬಂದರನ್ನು ಅಭಿವೃದ್ಧಿ ಪಡಿಸಿದರೆ ಈ ಭಾಗದಿಂದ ರಫ್ತಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರಲ್ಲದೇ ಉದ್ಯಮಿಗಳು ಹಾಗೂ ಹೂಡಿಕೆದಾರರ ಮನಸ್ಥಿತಿ ಬದಲಾಗಬೇಕು. ಬೆಂಗಳೂರು ಹೊರತಾಗಿ ಬೇರೆ ಕಡೆಗೆ ಇರುವ ನಗರಗಳಲ್ಲಿ ಹೂಡಿಕೆ ಮಾಡಲು ಮುಂದಾಗಬೇಕು ಎಂದರು.