ದೇಶ ಹಾಗೂ ರಾಜ್ಯದ ಯುವಕರಲ್ಲಿ ಉತ್ಸಾಹ ತುಂಬಲಿದೆ: ಸಿಎಂ ಬೊಮ್ಮಾಯಿ

BASAVARAJ BOMAI
Advertisement

ಹುಬ್ಬಳ್ಳಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸುವುದರಿಂದ ದೇಶ ಹಾಗೂ ರಾಜ್ಯದ ಯುವಕರಲ್ಲಿ ಹುರುಪು ಹಾಗೂ ಉತ್ಸಾಹ ತುಂಬಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅಖಿಲ ಭಾರತ ಯುವಜನೋತ್ಸವ ಪ್ರಥಮ ಬಾರಿಗೆ ಈ ಭಾಗದಲ್ಲಿ ಒಂದು ವಾರಗಳ ಕಾಲ ನಡೆಯಲಿದೆ. ಭಾರತದ ಜನಸಂಖ್ಯಾ ಲಾಭವನ್ನು ಪ್ರಧಾನಿಗಳು ತಿಳಿಸಿದ್ದಾರೆ. ಜನಸಂಖ್ಯೆ ಅಭಿವೃದ್ಧಿಗೆ ಮಾರಕ ಎನ್ನುತ್ತಿದ್ದುದನ್ನು ಪರಿವರ್ತಿಸಿ ಜನಸಂಖ್ಯೆಯನ್ನು ಬಳಸಿಕೊಂಡು ದೇಶ ಕಟ್ಟಬಹುದು. ಶೇ 40 ರಷ್ಟು ಯುವಜನಾಂಗವಿರುವ ದೇಶದಲ್ಲಿ ಅವರಿಗೆ ಕೌಶಲ್ಯ ತರಬೇತಿ ನೀಡಿ ಅವಕಾಶ ಕಲ್ಪಿಸಿದರೆ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಮನಗಂಡು ಯುವಕರಿಗೆ ಅಗತ್ಯ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳನ್ನು ಪ್ರಧಾನಮಂತ್ರಿ ಗಳು ರೂಪಿಸಿದ್ದಾರೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಥಮ ಬಾರಿಗೆ ಮೂರು ವರ್ಷಗಳ ಲ್ಲಿ ಹಲವಾರು ಡಿಗ್ರಿಗಳನ್ನು ಪಡೆಯಬಹುದಾಗಿದೆ. ಬಹುಮಾಧ್ಯಮ ಶಿಕ್ಷಣವನ್ನು ದೇಶದಲ್ಲಿ ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಕೌಶಲ್ಯಾಭಿವೃದ್ಧಿಗೆ ಒತ್ತು
ಕೌಶಲ್ಯಾಭಿವೃದ್ಧಿಗೆ ಸ್ಕಿಲ್ ಇಂಡಿಯಾ, ಮುದ್ರಾ ಯೋಜನೆ, ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಜೀತೋ ಇಂಡಿಯಾ ಮೂಲಕ ಒಲಂಪಿಕ್ಸ್ ನಲ್ಲಿ ಪ್ರಥಮ ಬಾರಿಗೆ ದೊಡ್ಡ ಪ್ರಮಾಣದ ಸಾಧನೆಯಾಗಿದೆ. ಸಂಸ್ಕೃತಿ ವಲಯದಲ್ಲಿಯೂ ಯುವಕರಿಗೆ ಸಮಗ್ರ ಅವಕಾಶ ನೀಡುವ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರು ಹುಬ್ಬಳಿಗೆ ಆಗಮಿಸುವುದರಿಂದ ಯುವಜನೋತ್ಸವ ಯಶಸ್ವಿಯಾಗುವುದು ನಿಶ್ಚಿತ ಎಂದರು.