ಬೆಳಗಾವಿ: ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ. ದೇಶಪಾಂಡೆ ಅವರು 2022ನೇ ಸಾಲಿನ `ಅತ್ಯುತ್ತಮ ಶಾಸಕ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬುಧವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಶಸ್ತಿಗೆ ದೇಶಪಾಂಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು. ನಂತರ ದೇಶಪಾಂಡೆ ಅವರ ಸೇವೆ, ಸಾಧನೆ ಮತ್ತು ಕೊಡುಗೆಗಳನ್ನು ಕಾಗೇರಿ ಅವರು ಪ್ರಶಂಸಿಸಿದರು. ವೇದಿಕೆಗೆ ಕರೆದು ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನಕ್ಕೆ ಸಾಥ್ ನೀಡಿದರು. ಆರ್.ವಿ. ದೇಶಪಾಂಡೆ ಅವರು ಎಂಟು ಸಲ ವಿಧಾನಸಭೆಗೆ ಆಯ್ಕೆಯಾಗಿದ್ದು, ಅತ್ಯಂತ ಹಿರಿಯ ಶಾಸಕರಲ್ಲೊಬ್ಬರಾಗಿದ್ದಾರೆ. ಅನೇಕ ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿ 12 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.