ದೇಶದ ಆಂತರಿಕ ರಕ್ಷಣೆ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ. ಸರ್ಕಾರ ಪಿಎಫ್‌ಐ ಸೇರಿದಂತೆ ೯ ಸಹ ಸಂಘಟನೆಗಳ ಮೇಲೆ ೫ ವರ್ಷಗಳ ನಿಷೇಧ ವಿಧಿಸಿದೆ. ಈ ವಿಷಯದಲ್ಲಿ ಮತ, ಧರ್ಮ, ಜಾತಿ, ಭಾಷೆ, ರಾಜಕೀಯ ಸೇರಿದಂತೆ ಯಾವುದೂ ಅಡ್ಡಿ ಬರಬಾರದು. ಕೇಂದ್ರ ಸರ್ಕಾರ ಎಲ್ಲ ಮಾಹಿತಿ ಸಂಗ್ರಹಿಸಿ ಒಂದೇ ಬಾರಿ ೧೫ ರಾಜ್ಯಗಳಲ್ಲಿ ೯೩ ಕಡೆ ದಾಳಿ ನಡೆಸಿ ನೂರಾರು ಜನರನ್ನು ಬಂಧಿಸಿದೆ. ಬಂಧನ ಎರಡನೇ ದಿನವೂ ಮುಂದುವರಿಯಿತು. ಉತ್ತರ ಪ್ರದೇಶ, ತಮಿಳುನಾಡು, ಕರ್ನಾಟಕ, ಆಂಧ್ರ, ತೆಲಂಗಾಣ, ರಾಜಾಸ್ತಾನ, ದೆಹಲಿ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ. ಬಂಗಾಳ, ಬಿಹಾರ, ಮಣಿಪುರ ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ನಡೆದು ಪಿಎಫ್‌ಐ ಮುಖಂಡರನ್ನು ಬಂಧಿಸಲಾಗಿದೆ. ದಾಳಿ ಮತ್ತು ಬಂಧನ ವ್ಯವಸ್ಥಿತವಾಗಿ ನಡೆದಿದೆ. ಎಲ್ಲೂ ಗುಂಡಿನ ಚಕಮಕಿ ನಡೆದಿಲ್ಲ. ಮಧ್ಯರಾತ್ರಿ ಬಂಧನಗಳು ನಡೆದಿರಿಂದ ಅಮಾಯಕರಿಗೆ ತೊಂದರೆಯಾಗಿಲ್ಲ. ಕೇಂದ್ರ ಸರ್ಕಾರ ಈ ಸಂಸ್ಥೆಗಳ ೧೦ ವರ್ಷಗಳ ಜಾತಕವನ್ನು ಪತ್ತೆ ಮಾಡಿ ಎಲ್ಲ ಮಾಹಿತಿ ಸಂಗ್ರಹಿಸಿದೆ. ಇದು ಮುಂದಿನ ದಿನಗಳಲ್ಲಿ ನ್ಯಾಯಾಲಯದ ನಿಕಷಕ್ಕೆ ಒಳಪಡಲಿದೆ. ಅಲ್ಲಿಯವರೆಗೆ ಇವೆಲ್ಲವೂ ಕೇವಲ ಮಾಹಿತಿಯಾಗಿರುತ್ತದೆ. ಕೇಂದ್ರ ಸರ್ಕಾರ ತನ್ನ ಕ್ರಮಕ್ಕೆ ಬೇಕಾದ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಇದನ್ನು ಜನ ಸಾಮಾನ್ಯರು ಅರಿತು ಈ ಸಂಘಟನೆಯಲ್ಲಿ ಸಕ್ರಿಯವಾಗಿ ಜನರೊಂದಿಗೆ ವ್ಯವಹಾರ ನಡೆಸುವ ಮುನ್ನ ಎಲ್ಲವನ್ನೂ ಪರಿಶೀಲಿಸಿ ಸಮಾಜ ವಿದ್ರೋಹಿ ಶಕ್ತಿಗಳನ್ನು ದೂರವಿಡುವ ಕೆಲಸ ಮಾಡಬೇಕು. ಕೇಂದ್ರ ಸರ್ಕಾರ ತಿಳಿಸಿರುವ ಹಾಗೆ ಈ ಸಂಘಟನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರ ಸಂಘಟನೆಗಳ ಸಂಪರ್ಕ ಹೊಂದಿರುವುದು ಸಾಬೀತುಗೊಂಡಲ್ಲಿ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಲ್ಲಕ್ಕಿಂತ ದೇಶದ ರಕ್ಷಣೆ ಮುಖ್ಯ. ಹೊರಗಿನ ಶತ್ರುಗಳನ್ನು ಎದುರಿಸಲು ಸೇನೆ ಇದೆ. ಆಂತರಿಕವಾಗಿ ಶಾಂತಿ ಸುವ್ಯವಸ್ಥೆ ಕೆಡಿಸಲು ಯತ್ನಿಸುವ ಯಾವುದೇ ಶಕ್ತಿಯಾಗಲಿ, ಅದನ್ನು ನಿರ್ದಾಕ್ಷಿಣ್ಯವಾಗಿ ದಮನ ಮಾಡಬೇಕು. ಪ್ರಜಾತಂತ್ರ ರಕ್ಷಣೆಯ ಹೆಸರಿನಲ್ಲಿ ಈ ಸಂಘಟನೆಗಳು ಜನಸಾಮಾನ್ಯರ ಗಮನ ಸೆಳೆಯಲು ಯತ್ನಿಸುತ್ತವೆ. ಎಲ್ಲಿ ಯಾವುದೇ ಸಣ್ಣ ಗಲಭೆ ನಡೆದರೂ ಅದನ್ನು ದುರುಪಯೋಗಪಡಿಸಿಕೊಳ್ಳಲು ಕೈಹಾಕುತ್ತವೆ. ಈ ವಿಷಯದಲ್ಲಿ ಸರ್ಕಾರ ನಿಗಾವಹಿಸುವ ಹಾಗೆ ಜನಸಾಮಾನ್ಯರೂ ಎಚ್ಚರಿಕೆವಹಿಸಬೇಕು. ಇಂಥ ಸಂಘಟನೆಗಳನ್ನು ಸಮಾಜ ಮೊದಲು ದೂರವಿಡಬೇಕು. ಆಗ ಆ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ದೇಶ ವಿದ್ರೋಹದ ಕೆಲಸದಲ್ಲಿ ತೊಡಗಿದವರನ್ನು ಬಂಧಿಸುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ಪೊಲೀಸರು ಮಧ್ಯರಾತ್ರಿ ಕಾರ್ಯಾಚರಣೆ ನಡೆಸುವುದು ಅನಿವಾರ್ಯ. ವಿದೇಶದಿಂದ ಈಗ ದೇಣಿಗೆ ಬರುವುದರ ಮೇಲೆ ಕೇಂದ್ರ ಗೃಹ ಖಾತೆ ಹದ್ದಿನ ಕಣ್ಣು ಇಟ್ಟಿದೆ. ಅದರಲ್ಲೂ ವ್ಯಕ್ತಿಗಳಿಗೆ ಬರುವ ವಿದೇಶಿ ಹಣವನ್ನು ಪರಿಶೀಲನೆಗೆ ಒಪ್ಪಿಸುವುದು ಅನಿವಾರ್ಯ. ಹಿಂದೆ ಈ ರೀತಿ ವಿದೇಶದಿಂದ ಬರುವ ದೇಣಿಗೆಯನ್ನು ಪರಿಶೀಲಿಸುವ ಅಗತ್ಯವಿರಲಿಲ್ಲ. ಸಾಮಾಜಿಕ ಸೇವೆ ಎಂದು ಪರಿಗಣಿಸಲಾಗಿತ್ತು. ಈಗ ಭಯೋತ್ಪಾದನೆಗೆ ಹಣವನ್ನು ಸಾಮಾಜಿಕ ಸೇವೆಯ ಹೆಸರಿನಲ್ಲಿ ರವಾನಿಸುವ ಕೆಲಸ ನಡೆಯುತ್ತಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಹವಾಲಾ ಕೃತ್ಯ. ಇದಕ್ಕೆ ಕೊಡಲಿಪೆಟ್ಟು ಹಾಕದೆ ಇಲ್ಲಿ ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಈ ವಿಷಯದಲ್ಲಿ ಪ್ರತಿ ಪ್ರಜೆಯೂ ಎಚ್ಚರಿಕೆವಹಿಸುವುದು ಅಗತ್ಯ. ದೇಶದ ವಿವಿಧ ರಾಜ್ಯಗಳಲ್ಲಿ ಕೊಲೆಗಳು ನಡೆದಿವೆ. ಇವುಗಳು ವ್ಯಕ್ತಿಗತ ಎಂದು ಮೇಲುನೋಟಕ್ಕೆ ಕಂಡು ಬಂದರೂ ಅದರ ಹಿಂದೆ ದೇಶದ ಶಾಂತಿ ಕದಡುವ ಪ್ರಯತ್ನಗಳು ಎಂಬ ಅನುಮಾನ ಮೂಡಿದೆ. ಈ ವಿಷಯದಲ್ಲಿ ಯುವ ಜನಾಂಗ ಎಚ್ಚರಿಕೆವಹಿಸುವುದು ಅಗತ್ಯ. ಅವರು ಇಂಥ ಸಂಘಟನೆಗಳಿಂದ ದೂರ ಉಳಿದರೆ ಈ ಶಕ್ತಿಗಳು ನಿಷ್ಕ್ರಿಯಗೊಳ್ಳುತ್ತದೆ. ನಿಜ ನಮ್ಮಲ್ಲಿ ಬಡತನ ಮತ್ತು ನಿರುದ್ಯೋಗ ಇದೆ. ಆದರೆ ಇದಕ್ಕೆ ಈ ಸಂಘಟನೆಗಳು ಇವುಗಳಿಗೆ ತಾತ್ಕಾಲಿಕ ಪರಿಹಾರವನ್ನು ವ್ಯಕ್ತಿ ಮಟ್ಟದಲ್ಲಿ ನೀಡುತ್ತವೆ. ಇವುಗಳನ್ನು ಸಾರಾಸಗಟಾಗಿ ತಳ್ಳಿಹಾಕಿದರೆ ಯುವ ಜನಾಂಗವೂ ಉಳಿಯುತ್ತದೆ. ಮುಂದಿನ ಜನಾಂಗವನ್ನೂ ಕಾಪಾಡಬಹುದು. ಕೊರೊನಾ ಬಂದು ಹೋದರೂ ನಮ್ಮ ಆರ್ಥಿಕ ಬೆಳವಣಿಗೆ ಕುಂಠಿಗೊಂಡಿಲ್ಲ. ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಮತ್ತು ಬೆಲೆಏರಿಕೆ ಇರೂ ನಮ್ಮ ದೇಶದ ಪ್ರಗತಿ ಆಶಾಭಾವನೆಯನ್ನು ಮೂಡಿಸಿದೆ. ಇದಕ್ಕೆ ಯುವಶಕ್ತಿಯೇ ಕಾರಣ. ಇದನ್ನು ಅರಿತು ನಮ್ಮ ಯುವಕರು ದೇಶ ವಿದ್ರೋಹಿ ಶಕ್ತಿಗಳನ್ನು ಬಹಿರಂಗವಾಗಿ ದೂರವಿಡಬೇಕು. ರಾಜಕೀಯ ತತ್ವ ಮತ್ತು ವಿಚಾರ ಮಂಥನ ಬಹಿರಂಗವಾಗಿ ನಡೆಯಬೇಕು. ಆದರೆ ಯಾವುದೂ ದೇಶವನ್ನು ಒಡೆಯುವ ಕೆಲಸಕ್ಕೆ ಉತ್ತೇಜನ ನೀಡಬಾರದು. ಸಂವಿಧಾನವನ್ನು ಗೌರವಿಸುವ ಮತ್ತು ಅದನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಹಿಂದೆ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿವರು ಹಲವು ಮಾರ್ಗವನ್ನು ಅನುಸರಿಸಿರು. ಆದರೆ ಅವರು ಯಾರೂ ದೇಶ ವಿರೋಧಿ ಕೆಲಸ ಮಾಡಲಿಲ್ಲ. ಅವರು ಪ್ರಾಣ ತ್ಯಾಗ ಮಾಡಿದಾಗ ಯುವಕರೇ ಆಗಿರು ಎಂಬುದನ್ನು ಮರೆಯಬಾರದು. ನಮ್ಮ ಇಂದಿನ ಸುಖಕ್ಕಾಗಿ ಅವರು ತಮ್ಮ ಅಂದಿನ ಸುಖವನ್ನು ತ್ಯಾಗ ಮಾಡಿದರು. ಕಷ್ಟಪಟ್ಟು ಗಳಿಸಿದ ಸ್ವಾತಂತ್ರ‍್ಯವನ್ನು ವಿಭಜಕ ಶಕ್ತಿಗಳ ಕೈಗೆ ಒಪ್ಪಿಸುವುದು ಬೇಡ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ನಮಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಅವಕಾಶ ನೀಡಿದೆ.ಇಂಥ ಸಂದರ್ಭದಲ್ಲಿ ಸಂಕುಚಿತ ಮನೋಭಾವದ ಸಂಘಟನೆಗಳ ಆಮಿಷಗಳಿಗೆ ಬಲಿಯಾಗಬಾರದು. ದುರ್ದೈವ ಎಂದರೆ ಸುಶಿಕ್ಷಿತರೇ ಈ ಸಂಘಟನೆಗಳ ಘೋಷಣೆಗಳಿಗೆ ಬಲಿಯಾಗುತ್ತಿದ್ದಾರೆ. ಜನಸಾಮಾನ್ಯರು ತೆರಿಗೆ ಹಣದಲ್ಲಿ ಸುಶಿಕ್ಷಿತರಾದವರು ಸಮಾಜ ವಿರೋಧಿ ಕೃತ್ಯದಲ್ಲಿ ತೊಡಗುವುದು ಎಂದರೆ ಇಡೀ ಮನುಕುಲಕ್ಕೆ ಮಾಡಿದ ದ್ರೋಹ. ಅಖಂಡತೆಗೆ ಧಕ್ಕೆ ತರಲು ದೇಶದ ಹೊರಗೆ ಮತ್ತು ಒಳಗೆ ಹಲವು ಶಕ್ತಿಗಳು ಕೆಲಸ ಮಾಡುತ್ತವೆ. ಯುವ ಜನಾಂಗ ಈ ವಿಷಯದಲ್ಲಿ ಜಾಗೃತಗೊಂಡು ಕೆಲಸ ಮಾಡಿದಲ್ಲಿ ಇಂಥ ಸಂಘಟನೆಗಳು ತಂತಾನೇ ಸಾವನ್ನು ಕಾಣುತ್ತವೆ. ಸರ್ಕಾರ ಈ ಸಂಘಟನೆಗಳನ್ನು ಕೆಲವು ವರ್ಷ ನಿಷೇಧಿಸಬಹುದು. ಆದರೆ ಅದು ಬೇರೆ ಹೆಸರಿನಲ್ಲಿ ತಲೆಎತ್ತುವ ಅಪಾಯವಿದೆ. ಯುವ ಜನಾಂಗ ಮೊದಲು ಇಂಥ ಸಂಸ್ಥೆಗಳಿಗೆ ಮಾನಸಿಕ ಬಹಿಷ್ಕಾರ ಹಾಕಬೇಕು. ಆಗ ಸರ್ಕಾರದ ಕ್ರಮಕ್ಕೆ ಬಲ ಬರುತ್ತದೆ. ಕಾನೂನು ಕ್ರಮಗಳಿಗೆ ಮಿತಿ ಇರುತ್ತದೆ. ಆದರೆ ಜನಶಕ್ತಿಯ ಮುಂದೆ ಯಾವುದೂ ನಿಲ್ಲುವುದಿಲ್ಲ ಎಂಬುದನ್ನು ನಮ್ಮ ಪೂರ್ವಿಕರು ನಮಗೆ ತೋರಿಸಿಕೊಟ್ಟಿದ್ದಾರೆ. ಸಮಾಜಕ್ಕೆ ಯಾವುದು ಒಳ್ಳೆಯದು ಕೆಟ್ಟದು ಎಂಬುದು ನಮಗೆ ಗೊತ್ತಿರುವುದರಿಂದ ಕೆಟ್ಟ ಶಕ್ತಿಗಳನ್ನು ಮೊದಲು ದೂರವಿಡುವುದು ಯುವಕರ ಕೆಲಸ. ಇದಕ್ಕೂ ಭಾಷೆ, ಧರ್ಮ, ಜಾತಿ, ರಾಜಕೀಯ ಚಿಂತನೆಗೂ ಸಂಬಂಧವಿಲ್ಲ. ಜನಸಾಮಾನ್ಯರ ಬದುಕು ಎಲ್ಲ ಕಷ್ಟಗಳಿಂದ ಪಾರಾಗಿ ಬರಬೇಕು ಎಂದರೆ ಮೊದಲು ಇಂಥ ಜನವಿರೋಧಿ ಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ದೂರವಿಡಬೇಕು. ಜನಾದೇಶವನ್ನು ಯಾವ ನ್ಯಾಯಾಲಯದಲ್ಲೂ ಪ್ರಶ್ನಿಸಲು ಬರುವುದಿಲ್ಲ. ಜನರ ತೀರ್ಮಾನಕ್ಕೆ ಎಲ್ಲರೂ ತಲೆಬಾಗಲೇಬೇಕು. ಅದರಲ್ಲೂ ದೇಶದ ರಕ್ಷಣೆ ವಿಚಾರದಲ್ಲಿ ಜನ ಕೈಗೊಂಡ ತೀರ್ಮಾನಕ್ಕೆ ಅಪೀಲು ಎಂಬುದೇ ಇಲ್ಲ. ನಮ್ಮ ಪ್ರಜಾಪ್ರಭುತ್ವ ಸ್ವತಂತ್ರ ವಿಚಾರಧಾರೆಯ ಮೇಲೆ ರೂಪುಗೊಂಡಿದೆ. ಅದನ್ನು ಅಲುಗಾಡಿಸಲು ಯಾವುದೇ ಶಕ್ತಿ ಯತ್ನಿಸಿದರೆ ಅದನ್ನು ಜನರೇ ದಮನ ಮಾಡಬೇಕು.