ದೇಶದ ಪ್ರಪ್ರಥಮ ಹಸಿರು ಐಟಿಐ ಕರ್ನಾಟಕದಲ್ಲಿ

ITI
Advertisement

ಮಂಗಳೂರು: ಲಾಭ ರಹಿತ ಕ್ವೆಸ್ಟ್ ಅಲಯನ್ ಸಂಸ್ಥೆಯು ಭಾರತದಲ್ಲಿ ಮೂರು ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಹಸಿರು ಐಟಿಐಗಳಾಗಿ ಅಭಿವೃದ್ಧಿ ಪಡಿಸಲಿದೆ.
ದೇಶದ ಪ್ರಥಮ ಹಸಿರು ಐಟಿಐ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಮಂಗಳೂರಿನ ಸರ್ಕಾರಿ ಮಹಿಳೆಯರ ಐಟಿಐನಲ್ಲಿ ಈ ತಿಂಗಳ ಆರಂಭದಲ್ಲಿ ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಈ ಪ್ರಾಯೋಗಿಕ ಯೋಜನೆಯು ಇನ್ನೆರಡು ಐಟಿಐಗಳಲ್ಲಿ ಸಹ ಆರಂಭವಾಗಲಿದ್ದು, ಗುಜರಾತಿನ ಹಾಲೋಲ್ ಹಾಗೂ ಅಸ್ಸಾಂನ ಸಿಲ್ಚಾರ್ ನ ಸ್ರಿಕೊನ ಐಟಿಐಗಳು ಸಹ ಹಸಿರು ಐಟಿಐಗಳಾಗಿ ಅಭಿವೃದ್ಧಿ ಹೊಂದಲಿವೆ.
ಈ ಪ್ರಾಯೋಗಿಕ ಯೋಜನೆಯ ಮೂಲಕ ಹಸಿರು ಐಟಿಐ ಸೃಷ್ಟಿಸಲು ಕ್ವೆಸ್ಟ್ ಅಲಯನ್ಸ್ ಸಂಸ್ಥೆಯು ಆಯ್ದ ಐಟಿಐಗಳ ಸಹಯೋಗದೊಂದಿಗೆ ಕೆಲಸ ಮಾಡಲಿದೆ. ಐಟಿಐಗಳ ಹಸಿರೀಕರಣ ಯೋಜನೆಯನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಿದ್ದು – ಮೂಲಸೌಕರ್ಯ, ಜ್ಞಾನಗ್ರಹಣ ಹಾಗೂ ಹಸಿರು ವೃತ್ತಿಗಳಿಗಾಗಿ ವಿದ್ಯಾರ್ಥಿಗಳ ಸನ್ನದ್ಧತೆ – ಈ ಮೂರು ಹಂತಗಳನ್ನು ಒಳಗೊಂಡಿದೆ.
ಮೂಲಸೌಕರ್ಯ ಮಟ್ಟದಲ್ಲಿ ಈ ಐಟಿಐಗಳ ಕ್ಯಾಂಪಸ್ ಗಳನ್ನು ಇಂಗಾಲ ತಟಸ್ಥಗೊಳಿಸುವ ಉದ್ದೇಶದಿಂದ ಪರಿಸರ ಸ್ನೇಹಿ ಮಾಡಲಾಗುವುದು. ಕ್ವೆಸ್ಟ್ ಅಲಯನ್ಸ್ ಸಂಸ್ಥೆ ಈ ಐಟಿಯಗಳಲ್ಲಿ ಹಸಿರು ಆಡಿಟ್ ನಡೆಸಿ ಆಯಾ ಕಟ್ಟಡದ ಅವಶ್ಯಕತೆ ತಕ್ಕಂತೆ ಪ್ರತ್ಯೇಕ ಯೋಜನೆ ರೂಪಿಸಲಿದೆ. ಈ ಹಸಿರು ಯೋಜನೆಯು ಮಳೆ ನೀರು ಕೊಯ್ಲು, ಸೌರಶಕ್ತಿ, ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರ ಗಾರ್ಡನಿಂಗ್ ಮುಂತಾದ ಅಂಶಗಳನ್ನು ಒಳಗೊಳ್ಳಲಿದೆ.
ಮಂಗಳೂರಿನ ಸರ್ಕಾರಿ ಮಹಿಳೆಯರ ಐಟಿಐ ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲ ಶಿವಕುಮಾರ್ ಪ್ರತಿಕ್ರಿಯಿಸಿ ನಮ್ಮ ಸಂಸ್ಥೆಯು ಹಸಿರು ಐಟಿಐ ಆಗಿ ಪರಿವರ್ತನೆಗೊಳ್ಳುವ ಮೂಲಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಹಸಿರು ವೃತ್ತಿಗಳನ್ನು ಆಯ್ದುಕೊಳ್ಳಲು ಪ್ರೇರಣೆ ನೀಡಲಿದೆ. ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಹಸಿರು ಮನೋಭಾವ ಬೆಳೆಸುವುದು ಸಹ ನಮ್ಮ ಉದ್ದೇಶವಾಗಿದೆ. ಮೊದಲಿಗೆ ನಾವು ಸಂಸ್ಥೆಯನ್ನು ಆಡಿಟ್ ಮಾಡಿಸಿ ನಂತರ ಇದನ್ನು ಹೇಗೆ ಹಸಿರು ಐಟಿಐ ಆಗಿ ಪರಿವರ್ತಿಸಬಹುದು ಎಂಬ ಬಗ್ಗೆ ಯೋಜನೆ ರೂಪಿಸುತ್ತೇವೆ’ ಎಂದಿದ್ದಾರೆ.