ದೃಶ್ಯಮಾಲಿನ್ಯದ ಅಸಭ್ಯ ಪ್ರದರ್ಶನ

ಸಂಪಾದಕೀಯ
Advertisement

ಮೈಸೂರು ನಗರ ವ್ಯಾಪ್ತಿಯೊಳಗಿನ ವಿಧಾನಸಭಾ ಕ್ಷೇತ್ರವೊಂದರ ಶಾಸಕರ ಜನ್ಮ ದಿನ ಮೊನ್ನೆಯಷ್ಟೇ ನಡೆಯಿತು. ಇದಕ್ಕಾಗಿ ಇವರು ಪ್ರತಿನಿಧಿಸುವ ಕ್ಷೇತ್ರವಲ್ಲದೇ ನಗರದ ಇನ್ನಿತರ ಕಡೆ, ಫ್ಲೆಕ್ಸ್‌ಬ್ಯಾನರ್‌ಗಳನ್ನು ಭಾರೀ ಪ್ರಮಾಣದಲ್ಲಿ ಅಳವಡಿಸಲಾಗಿತ್ತು.
ಮೈಸೂರು ಪರಂಪರೆಯ ನಗರ, ಇಲ್ಲಿ ಫ್ಲೆಕ್ಸ್ ಬ್ಯಾನರ್‌ಗಳನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ ಎನ್ನುವ ಅಂಶವನ್ನು ಆಳುವ ಪಕ್ಷದ ಈ ಶಾಸಕರು ಪರಿಗಣಿಸಲಿಲ್ಲ.
ಇನ್ನೂ ಕುತೂಹಲದ ಅಂಶವೆಂದರೆ ಇದೇ ಶಾಸಕರು ಹಲವು ಕರ‍್ಯಕ್ರಮಗಳಲ್ಲಿ ನಮ್ಮ ಪರಿಸರವನ್ನು ರಕ್ಷಿಸಬೇಕು, ಜನತೆ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಕೈಬಿಡಬೇಕು, ನಗರದ ಸ್ವಚ್ಛತೆ ಕಾಪಾಡಲು ಸಹಕರಿಸಬೇಕು ಎಂದೆಲ್ಲಾ ಮನವಿ ಮಾಡಿಕೊಳ್ಳುತ್ತಾರೆ. ಈ ಶಾಸಕರು ಹೇಳುವುದಕ್ಕೂ ಮತ್ತು ಇವರ ಬೆಂಬಲಿಗರು ನಡೆದುಕೊಳ್ಳುವುದಕ್ಕೂ ಬಹುದೊಡ್ಡ ಅಂತರವಿದೆ ಎನ್ನುವುದು ಮೊನ್ನೆಯ ಘಟನೆಯಿಂದ ಮತ್ತೆ ಸಾಬೀತಾಯ್ತು.
ಮೈಸೂರಿನಲ್ಲಿ ಪರಿಸರ ಇತ್ತೀಚೆಗೆ ಬಹಳ ಸೂಕ್ಷ್ಮವಾಗುತ್ತಿದೆ. ಕೊರೊನಾ ಲಾಕ್‌ಡೌನ್ ನಂತರ ನಿಯಂತ್ರಣಕ್ಕೆ ಬಂದಿ ಮಾಲಿನ್ಯ ಪ್ರಮಾಣ ಈಗ ನಿತ್ಯವೂ ಏರುಗತಿಯಲ್ಲಿದೆ. ಶಬ್ದ ಮಾಲಿನ್ಯ ಮತ್ತು ವಾಯುಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದೆ. ಇದರ ಜೊತೆಗೀಗ ದೃಶ್ಯ ಮಾಲಿನ್ಯವೂ ಸೇರಿಕೊಂಡಿದೆ.
ಅಂದಹಾಗೆ ಮೈಸೂರು ನಗರಪಾಲಿಕೆ ತನ್ನ ವ್ಯಾಪ್ತಿಯಲ್ಲಿ ಹಲವು ತಿಂಗಳ ಹಿಂದೆಯೇ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿದೆ. ಬಹುಮುಖ್ಯವಾಗಿ ನಗರದಾದ್ಯಂತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ನಿರ್ಬಂಧಿಸಿದೆ. ಆದರೆ ಈ ನಿರ್ಬಂಧ ಪ್ರಭಾವಿ ವ್ಯಕ್ತಿಗಳಿಗೆ ಅನ್ವಯಿಸುತ್ತಿಲ್ಲ. ಫ್ಲೆಕ್ಸ್ ನಿರ್ಬಂಧ ಜಾರಿಯಾದಾಗ ಪಾಲಿಕೆಯ ಆರೋಗ್ಯಾಧಿಕಾರಿಗಳು ಮತ್ತು ತಂಡದವರು ವಿನೈಲ್ ಪೋಸ್ಟರ್‌ಗಳನ್ನು ಮುದ್ರಿಸುವ ಘಟಕಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿರು. ಅನಧಿಕೃತ ಘಟಕಗಳಿಗೆ ಬೀಗ ಜಡಿದರು. ಫ್ಲೆಕ್ಸ್ ಅಳವಡಿಸಲು ಅನುಮತಿಯೇ ಇಲ್ಲ ಎಂದಿರು. ಹಾಗೊಂದು ವೇಳೆ ಅಳವಡಿಸಲೇಬೇಕೆಂದರೆ ಇದಕ್ಕೆ ಕಠಿಣ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಿರು. ಆದರೆ ಇವು ಜನಸಾಮಾನ್ಯರಿಗೆ ಮಾತ್ರ ಅನ್ವಯವಾಗುತ್ತಿವೆ. ಪ್ರಭಾವಿ ರಾಜಕಾರಣಿಗಳು, ಆಳುವ ಪಕ್ಷದ ಪದಾಧಿಕಾರಿಗಳು ಮತ್ತಿತರರು ಪಾಲಿಕೆಯ ಈ ಆದೇಶಕ್ಕೆ ಬೆಲೆ ನೀಡುತ್ತಿಲ್ಲ!
ಮರಿ ಪುಡಾರಿಗಳ ಜನ್ಮದಿನಕ್ಕೆ ಶುಭಾಷಯ ಕೋರುವ ದೊಡ್ಡ ದೊಡ್ಡ ಫಲಕಗಳನ್ನು ವೃತ್ತಗಳಲ್ಲಿ, ರಸ್ತೆ ಬದಿಗಳಲ್ಲಿ ಅಳವಡಿಸಿ ದೃಶ್ಯ ಮಾಲಿನ್ಯ ಉಂಟುಮಾಡುವುದೀಗ ನಗರದಾದ್ಯಂತ ಸಾಮಾನ್ಯವಾಗಿದೆ. ಇನ್ನು ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳು ನಡೆದಾಗ, ಯಾವುದಾದರೂ ಪಕ್ಷದ ನಾಯಕರು ಭೇಟಿ ನೀಡಿದಾಗ, ಫ್ಲೆಕ್ಸ್‌ಗಳ ಹಾವಳಿ ಮಿತಿಮೀರುತ್ತದೆ. ಇವೆಲ್ಲವನ್ನು ಗಮನಿಸಿಯೂ ಕಣ್ಣುಮುಚ್ಚಿ ಕುಳಿತಿರುವ ಪಾಲಿಕೆಯ ಹಿರಿಯ ಅಧಿಕಾರಿಗಳು ತಮ್ಮ ಆತ್ಮಸಾಕ್ಷಿಗೆ ಚ್ಯುತಿ ತಂದುಕೊಳ್ಳುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.
ಇಷ್ಟಕ್ಕೂ- ಈ ಗಣ್ಯರಾಜಕಾರಣಿಗಳ ಜೊತೆ ಫ್ಲೆಕ್ಸ್‌ಗಳಲ್ಲಿ ಮುಖತೂರಿಸುವ ಹಿಂಬಾಲಕರ ಹಿಂಡಿನದೊಂದು ದೊಡ್ಡ ಕತೆ. ಆಸಕ್ತಿಯಿಂದ ಹುಡುಕಿದರೆ ಇವರಲ್ಲಿ ಕೆಲವರಾದರೂ ರೌಡಿ ಶೀಟರ್‌ಗಳು ಸಿಗುತ್ತಾರೆ! ಇನ್ನುಳಿದಂತೆ ಮೀಟರ್ ಬಡ್ಡಿ ವ್ಯವಹಾರದವರು, ಅವರಿವರನ್ನು ಬೆದರಿಸಿ ಹಣ ಕೀಳುವ ಮರಿ ಪುಡಾರಿ ಪೀಡಕರಿಗೂ ಈ ಮುಖಗಳ ಸಾಲಿನಲ್ಲಿ ಕೊರತೆಯಿರುವುದಿಲ್ಲ!