ಹುಬ್ಬಳ್ಳಿ: ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಿ ಬಿಜೆಪಿ ಮತ ಕೇಳುವುದಿಲ್ಲ. ಬದಲಾಗಿ ಹಿಂದು, ಮುಸ್ಲಿಂ ಹೇಳಿಕೊಂಡು ಮತ ಪಡೆಯುತ್ತಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ದೂರಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಬ್ರೋಕರ್ ಪಕ್ಷಕ್ಕಿಂತ ಹೆಚ್ಚಾಗಿದೆ. ಇವರ ಆಡಳಿತದಲ್ಲಿ ಭ್ರಷ್ಟಾಚಾರವೇ ತುಂಬಿದೆ. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರು ಲವ್ ಜಿಹಾದ್ ಬಗ್ಗೆ ಮಾತನಾಡಿ, ರಸ್ತೆ, ಚರಂಡಿ, ಕುಡಿಯುವ ನೀರಿನ ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ. ಅವರಿಗೆ ಅಭಿವೃದ್ಧಿ ಬೇಡವಾಗಿದೆ. ಹಿಂದು ಮುಸ್ಲಿಂ ಎಂದು ಧರ್ಮಗಳ ನಡುವೆ ಒಡಕು ಮೂಡಿಸಿ ಅಧಿಕಾರಕ್ಕೆ ಬಂದು ದುಡ್ಡು ಮಾಡುವುದು ಅಷ್ಟೇ ಬಿಜೆಪಿಗೆ ಬೇಕಾಗಿದೆ ಎಂದರು.
ವರುಣಾ ಹಾಗೂ ಚಾಮರಾಜ ನಗರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನೆ. ಕೋಲಾರ ಹಾಗೂ ಬೇರೆಡೆ ಸಹ ಸ್ಪರ್ಧಿಸುವುದು ಬೇಡಾ ಎಂದಿದ್ದೇನೆ. ಸಿದ್ದರಾಮಯ್ಯ ಅವರಿಗಾಗಿ ನಾನು ನನ್ನ ಕ್ಷೇತ್ರವಾದ ಚಾಮರಾಜ ನಗರ ಬಿಟ್ಟು ಕೊಡುತ್ತಿಲ್ಲ. ರಾಜ್ಯದ ಜನರ ಹಿತಕ್ಕಾಗಿ ಬಿಟ್ಟು ಕೊಡುತ್ತಿದ್ದೇನೆ. ಅವರು ಚುನಾವಣಾ ಸಂದರ್ಭದಲ್ಲಿ ರಾಜ್ಯ ಪ್ರವಾಸ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಓರ್ವ ಇಂಜಿನಿಯರ್ ವಿಧಾನಸೌಧಕ್ಕೆ ೧೦ ಲಕ್ಷ ರೂ. ತೆಗೆದುಕೊಂಡು ಹೋಗುತ್ತಾನೆ ಎಂದರೆ ಅದು ಒಂದು ಸಚಿವರಿಗೆ ಲಂಚ ನೀಡಲು ಅಥವಾ ತನ್ನ ವರ್ಗಾವಣೆ ಮಾಡಿಸಿಕೊಳ್ಳಲು ಎಂದು ಸ್ಪಷ್ಟವಾಗುತ್ತದೆ. ಸಾಮಾನ್ಯ ವ್ಯಕ್ತಿ ಹಣ ತೆಗೆದುಕೊಂಡು ಹೋಗಿದ್ದರೆ ಈ ಪ್ರಶ್ನೆ ಮೂಡುತ್ತಿರಲಿಲ್ಲ ಎಂದರು.