ರಾಯಚೂರು: ಡಿ.ಕೆ ಶಿವಕುಮಾರ ಹಾಗೂ ಸಿದ್ಧರಾಮಯ್ಯ ಅವರು ಬಸ್ ಯಾತ್ರೆಯು ಯಾವುದೇ ದಿಕ್ಕು ದೆಸೆ ಇಲ್ಲದ ಯಾತ್ರೆಯಾಗಿದೆ. ಅಲ್ಲದೇ ಇದೊಂದು ಸುಳ್ಳಿನ ಯಾತ್ರೆಯಾಗಿದೆ ಎಂದು ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು ಅವರು ವ್ಯಂಗ್ಯವಾಗಿ ಟೀಕಿಸಿದರು.
ಬುಧವಾರ ಕೃಷಿ ವಿಜ್ಞಾನಗಳ ವಿವಿಯಲ್ಲಿ ಏರ್ಪಡಿಸಿದ್ದ ಕೃಷಿ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್‌ನ ಈ ಇಬ್ಬರ ನಾಯಕರ ಬಗ್ಗೆ ರಾಜ್ಯದ ಜನರಿಗೆ ತಿಳಿದಿದೆ. ಸುಳ್ಳಿನ ಶೂರರು. ಜನರು ಯಾರು ಅವರ ಮಾತನ್ನು ಕೇಳುವುದಿಲ್ಲ. ಕಾಂಗ್ರೆಸ್ ನಾಯಕರು ಯಾವುದೇ ಬಸ್ ಯಾತ್ರೆ ಮಾಡಿದರೂ ರಾಜ್ಯದ ಜನರು ಕಾಂಗ್ರೆಸ್‌ನ್ನು ತಿರುಸ್ಕಾರ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಅವರ ನಮ್ಮ ಪಕ್ಷದ ಹಿರಿಯ ನಾಯಕರು. ಅವರನ್ನು ಎಂಎಲ್ಸಿ ಮಾಡಲಾಗಿದೆ. ಅವರಿಗೆ ಬೇಸರವಾಗಿದ್ದರೆ, ಅವರೊಂದಿಗೆ ಸಿಎಂ ಹಾಗೂ ಪಕ್ಷದ ನಾಯಕರು ಮಾತುಕತೆ ಮನವೊಲಿಸಲಿದ್ದಾರೆ ಎಂದು ತಿಳಿಸಿದರು. ಮಾಜಿ ಸಚಿವ ಜನಾರ್ದನರೆಡ್ಡಿ ಅವರನ್ನು ನಾನು ಭೇಟಿಯೇ ಆಗಿಲ್ಲ. ಅವರ ಜನ್ಮದಿನಕ್ಕೆ ಒಳ್ಳೆಯದು ಆಗಲಿ.ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಿಜೆಪಿಯಾಗಿ ಯಾವುದೇ ಹಿನ್ನಡೆಯಾಗವುದಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಪ್ರಾದೇಶಿಕ ಪಕ್ಷದಿಂದ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ಆರು ಬಾರಿ ಗೆದ್ದು ನಾನು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಜಾತಿ ಹೇಳಿಕೊಂಡು ರಾಜಕೀಯ ಮಾಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುವುದು ನಿರ್ಧರಿಸಿಲ್ಲ ಎಂದು ತಿಳಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುತ್ತಿದ್ದು, ಅವರಂತೆ ನಾನು ಜನಪ್ರಿಯ ನಾಯಕನಲ್ಲ. ಅವರು ಎಲ್ಲಿಯಾದರೂ ನಿಂತು ಗೆಲ್ಲಬಹುದು ಎಂದು ಹೇಳಿದರು. ರಾಜ್ಯಕ್ಕೆ ಹೊಸದಾಗಿ 1500 ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಖರೀದಿಸುತ್ತಿದ್ದು, ತರಿಸುತ್ತಿದ್ದು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 12,00 ಹೊಸ ಬಸ್‌ಗಳನ್ನು ನೀಡಲಾಗುವುದು ಎಂದು ವಿವರಿಸಿದರು.