ಮೈಸೂರು: ದಸರಾ ಜಂಬೂ ಸವಾರಿಯ ಪುಷ್ಪಾರ್ಚನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುವುದಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ದಸರಾ ಉದ್ಘಾಟನೆಗೆ ಸೆ.26 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಲಿದ್ದು, ಅವರ ಕಾರ್ಯಕ್ರಮದ ಪಟ್ಟಿ ಅಂತಿಮವಾಗುತ್ತಿದೆ. ಅವರು ಮೈಸೂರು ಅರಮನೆಗೆ ಭೇಟಿ ನೀಡುವ ಬಗ್ಗೆ ಮಾಹಿತಿ ಕೇಳಲಾಗಿದೆ. ಆದರೆ, ರಾಷ್ಟ್ರಪತಿ ಭವನದಿಂದ ಅರಮನೆ ಭೇಟಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ, ಬಂದಮೇಲೆ ಅಂತಿಮವಾಗುತ್ತದೆ ಎಂದರು.ರಾಷ್ಟ್ರಪತಿ ಭೇಟಿ ಹಿನ್ನಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಅಂತಿಮಗೊಳಿಸಲಾಗುತ್ತಿದೆ. ಆದರೆ ದಸರಾ ಜಂಬೂ ಸವಾರಿಯ ಪುಷ್ಪಾರ್ಚನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವುದಿಲ್ಲ, ಬದಲಾಗಿ ಕೇಂದ್ರದ 4 ಜನ ಮಂತ್ರಿಗಳು ದಸರಾ ಉದ್ಘಾಟನೆಗೆ ಆಗಮಿಸುವ ನಿರೀಕ್ಷೆಯಿದೆ. ಅದರ ಆಧಾರದ ಮೇಲೆ ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಯಾರಿರಬೇಕು ಎಂಬುದು ಅಂತಿಮವಾಗಲಿದೆ ಎಂದರು.