ಹುಬ್ಬಳ್ಳಿ: ಬೈರಿದೇವರಕೊಪ್ಪ ಹಜರತ್ ಸೈಯದ್ ಮಹಮೂದ್ ಶಾ ಖಾದ್ರಿ ದರ್ಗಾ ತೆರವಿಗೆ ನೇರವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಕಾರಣ. ದುರುದ್ದೇಶದಿಂದ ಸರಕಾರದ ಮೇಲೆ ಒತ್ತಡ ತಂದು ರಾತ್ರೋರಾತ್ರಿ ತೆರವು ಮಾಡಿಸಿದ್ದಾರೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಕಳೆದ ವಾರ ತೆರವುಗೊಂಡ ಬೈರಿದೇವರಕೊಪ್ಪ ದರ್ಗಾಕ್ಕೆ ಸೋಮವಾರ ಮಧ್ಯಾಹ್ನ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೋಮುಗಲಭೆ ಸೃಷ್ಟಿಸಿ ಅಶಾಂತಿ ವಾತಾವರಣ ಮಾಡಿ ಅದರ ಲಾಭ ಪಡೆಯಲು ಬಿಜೆಪಿ ಮುಂದಾಗಿತ್ತು. ಆದರೆ, ಹಿಂದು, ಮುಸ್ಲಿಂ ಬಾಂಧವರು ಇದಕ್ಕೆ ಅವಕಾಶ ಕೊಡಲಿಲ್ಲ. ಪ್ರಜ್ಞಾವಂತಿಕೆಯಿಂದ ನಡೆದುಕೊಂಡರು. ಅವರ ಮುಂದೆ ಬಿಜೆಪಿಯವರ ಆಟ ನಡೆಯಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ದರ್ಗಾಕ್ಕೆ ಮುಸ್ಲಿಮರಿಗಿಂತ ಹಿಂದೂಗಳೇ ಹೆಚ್ಚಿನ ಭಕ್ತರಿದ್ದಾರೆ. ಅವರೇ ಹೆಚ್ಚು ನಡೆದುಕೊಂಡು ಬಂದಿದ್ದಾರೆ ಎಂಬುದನ್ನು ಕೇಳ್ಪಟ್ಟೆ. ಇಂತಹ ಸಾಮರಸ್ಯದ ದರ್ಗಾ ತೆರವು ಮಾಡಿದ್ದು ಸರಿಯಲ್ಲ ಎಂದರು.