ತೇರದಾಳ ಕ್ಷೇತ್ರದಿಂದ ಸಿದ್ದು ಕೊಣ್ಣೂರ ಕೈ ಹುರಿಯಾಳು

ಸಿದ್ದು ಕೊಣ್ಣೂರ
Advertisement

ಬಾಗಲಕೋಟೆ: ಕಾಂಗ್ರೆಸ್‌ನ ಮೂರನೇ ಪಟ್ಟಿ ಪ್ರಕಟವಾಗಿದ್ದು ಮಾಜಿ ಸಚಿವರಾದ ಎಸ್.ಆರ್. ಪಾಟೀಲ ಹಾಗೂ ಉಮಾಶ್ರೀ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಕ್ಷೇತ್ರದಿಂದ ಎಸ್.ಆರ್.ಪಾಟೀಲ ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿತ್ತು. ಅಲ್ಲದೇ ತೇರದಾಳ ಕ್ಷೇತ್ರದಿಂದ ಉಮಾಶ್ರೀ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಅಚ್ಚರಿ ಎಂಬಂತೆ ಟಿಕೆಟ್ ಸಿದ್ದು ಕೊಣ್ಣೂರ ಅವರ ಪಾಲಾಗಿದೆ.
ನೇಕಾರರು ಹೆಚ್ಚಿರುವ ತೇರದಾಳ ಮತಕ್ಷೇತ್ರದಲ್ಲಿ ಅದೇ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಜೋರಾಗಿತ್ತು ಆದರೆ ನೇಕಾರರ ಬದಲಾಗಿ ಪಂಚಮಸಾಲಿ ಸಮುದಾಯದ ಸಿದ್ದು ಕೊಣ್ಣೂರ ಅವರಿಗೆ ಟಿಕೆಟ್ ಲಭಿಸಿದೆ. ಅವರದೇ ಸಮುದಾಯದ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಶಾಸಕ ಲಕ್ಷ್ಮೀ ಹೆಬ್ಬಾಳಕರ ಅವರು ಸಿದ್ದು ಕೊಣ್ಣೂರ ಪರ ಪ್ರಬಲ ಬ್ಯಾಟಿಂಗ್ ಮಾಡಿದ್ದರಿಂದ ಟಿಕೆಟ್ ಲಭಿಸಿದೆ ಎನ್ನಲಾಗಿದೆ.
ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವೆ ಉಮಾಶ್ರೀ, ಡಾ.ಎಂ.ಎಸ್. ದಡ್ಡೇನ್ನವರ, ಡಾ.ಎ.ಆರ್. ಬೆಳಗಲಿ, ಡಾ. ಪದ್ಮಜಿತ ನಾಡಗೌಡ ಸೇರಿ ೧೬ ಜನ ಆಕಾಂಕ್ಷಿಗಳಿದ್ದರು. ಸಿದ್ದು ಕೊಣ್ಣೂರ ಆಕಾಂಕ್ಷಿಯಾಗಿದ್ದರೂ ಅವರ ಹೆಸರು ಮುನ್ನೆಲೆಗೆ ಬಂದಿರಲಿಲ್ಲ. ಮೊದಲೆರಡು ಪಟ್ಟಿಯಲ್ಲಿ ಹೆಸರು ಬರದೆ ಇದ್ದಾಗ ಪದ್ಮಜಿತ ನಾಡಗೌಡ, ದಡ್ಡೇನ್ನವರ ಅಥವಾ ಕೊಣ್ಣೂರ ಮೂವರಲ್ಲಿ ಒಬ್ಬರಿಗೆ ಟಿಕೆಟ್ ಸಿಗಲಿದೆ ಎಂದು ಅಂದಾಜಿಸಲಾಗಿತ್ತು. ಕೊನೆಗೂ ಸಿದ್ದು ಕೊಣ್ಣೂರ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಜಿಲ್ಲೆಯ ನಾಯಕರು ಹುಬ್ಬೇರಿಸುವಂತೆ ಮಾಡಿದೆ.
ಇನ್ನು ದೇವರಹಿಪ್ಪರಗಿ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ ಅವರಿಗೆ ಟಿಕೆಟ್ ನೀಡಲು ಎಂ.ಬಿ. ಪಾಟೀಲ ಅವರು ಅಡ್ಡಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಕೊನೆಗೂ ಎಸ್.ಆರ್. ಪಾಟೀಲ ಅವರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಶರಣಪ್ಪ ಸುಣಗಾರ ಅವರಿಗೆ ಆ ಕ್ಷೇತ್ರದಿಂದ ಟಿಕೆಟ್ ಪಕ್ಕಾ ಆಗಿದೆ.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಎಸ್.ಆರ್. ಪಾಟೀಲ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ವಿಧಾನಸಭಾ ಚುನಾವನೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸುರ್ಜೆವಾಲಾ ಅವರ ಸೂಚನೆ ಮೇರೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಎಸ್.ಆರ್.ಪಾಟೀಲ ಹೇಳಿದ್ದರು. ಆದರೆ ಕೊನೆಗೂ ಅವರಿಗೆ ಟಿಕೆಟ್ ತಪ್ಪಿರುವುದು ಅವರ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಅವರು ಮುಂದೆ ಯಾವ ಹೆಜ್ಜೆಯನ್ನಿಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.