ತೆಂಗಿನ ಕಾಯಿ ಕೀಳಲು ಬಂದ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ

CHILD
Advertisement

ಮಂಗಳೂರು: ತೆಂಗಿನ ಕಾಯಿ ಕೀಳಲೆಂದು ಬಂದ ಪರಿಚಯದ ವ್ಯಕ್ತಿಯೊಬ್ಬ ಮನೆಯಲ್ಲಿ ಒಬ್ಬಂಟಿಯಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಬಶೀರ್(29)ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ. ವೃತ್ತಿಯಲ್ಲಿ ಪ್ಲಂಬರ್ ಆಗಿರುವ ಬಶೀರ್ ಕಳೆದ ಸಂಜೆ ದೇರಳಕಟ್ಟೆಯ ಸಂಬಂಧಿಕರ ಮನೆಗೆ ತೆರಳಿದ್ದು ಈ ವೇಳೆ ಪಕ್ಕದ ಪರಿಚಯಸ್ಥರ ಮನೆಗೆ ಕಾಯಿ ಕೀಳಲೆಂದು ತೆರಳಿದ್ದಾನೆ. ಮನೆಯಲ್ಲಿ ಒಬ್ಬಂಟಿಯಿದ್ದ ಬಾಲಕಿಯನ್ನ ಕೈ ಹಿಡಿದು ಎಳೆದಿದ್ದು ಬಾಲಕಿ ಕಿರುಚಾಡಿದ್ದಾಳೆ. ಬಾಲಕಿಯ ಕೂಗನ್ನ ಕೇಳಿಸಿದ ನೆರೆಹೊರೆಯವರು ಓಡಿ ಬಂದಿದ್ದು ಅದಾಗಲೇ ಆರೋಪಿ ಸ್ಥಳದಿಂದ ಓಡಿ ಪರಾರಿಯಾಗಿದ್ದ.
ಸಂತ್ರಸ್ತ ಬಾಲಕಿಯ ಕುಟುಂಬವು ಆರೋಪಿ ಬಶೀರ್ ಕುಟುಂಬಕ್ಕೆ ಆಪ್ತರಾಗಿದ್ದು ಕೆಲ ತಿಂಗಳ ಹಿಂದಷ್ಟೆ ನಡೆದಿದ್ದ ಬಶೀರನ ಸಹೋದರಿಯ ಮದುವೆ ಸಮಾರಂಭದಲ್ಲಿಯೂ ಭಾಗವಹಿಸಿದ್ದರು. ಬಾಲಕಿಯ ಕುಟುಂಬ ಆರೋಪಿಯ ವಿರುದ್ಧ ದೂರು ನೀಡಲು ಹಿಂಜರಿದಿದ್ದು ನೆರೆಹೊರೆಯವರ ಒತ್ತಾಯದ ಮೇರೆಗೆ ಸಂತ್ರಸ್ತ ಬಾಲಕಿಯ ಅಜ್ಜ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಬಜರಂಗದಳ ಆಗ್ರಹಿಸಿದೆ. ಹಿಂದು ಸಮಾಜದ ಮೇಲೆ ಅನ್ಯಮತೀಯರು ಪದೇ ಪದೇ ನಂಬಿಕೆ ದ್ರೋಹ ಎಸಗುತ್ತಿದ್ದು ಬಾಲಕಿಗೆ ಕಿರುಕುಳ ನೀಡಿದ ಆರೋಪಿ ಬಶೀರನನ್ನ ಶೀಘ್ರ ಬಂಧಿಸುವಂತೆ ವಿಶ್ವ ಹಿಂದು ಪರಿಷತ್, ಬಜರಂಗದಳದ ಪ್ರಮುಖರಾದ ಗೋಪಾಲ್ ಕುತ್ತಾರು, ಪದ್ಮನಾಭ ಮರ್ಕೆದು ಆಗ್ರಹಿಸಿದ್ದಾರೆ.