ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್‌ಗೆ ಸೇರಿದ ಹೆಲಿಕಾಪ್ಟರ್ ಒಂದು ನಗರದ ವಿವಿಧೆಡೆ ತುರ್ತು ಭೂ ಸ್ಪರ್ಶಕ್ಕೆ ಯತ್ನ ನಡೆಸಿ ತೆರಳಿದ್ದು, ಇದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಶನಿವಾರ ನಡೆದಿದೆ.
ಭಾರತೀಯ ಕೋಸ್ಟ್ ಗಾರ್ಡ್‌ನ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಇದು ಎನ್ನಲಾಗಿದ್ದು, ಮೊದಲು ನಗರದ ಮಾಲಾದೇವಿ ಮೈದಾನದಲ್ಲಿ ಭೂ ಸ್ಪರ್ಶಕ್ಕೆ ಯತ್ನ ನಡೆಸಿ ಮರಳಿತ್ತು. ಬಳಿಕ ಸ್ವಲ್ಪ ಹೊತ್ತಿನ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರಿಗಿನ ಫ್ಲೈ ಓವರ್ ಮೇಲೆ ಹಾಗೂ ಟ್ಯಾಗೋರ್ ಕಡಲತೀರದಲ್ಲಿ ಇಳಿಯಲು ಪ್ರಯತ್ನಿಸಿ ಪುನಃ ತೆರಳಿದೆ.
ಹೆಲಿಕಾಪ್ಟರ್ ತೀರಾ ಕೆಳಮಟ್ಟಕ್ಕೆ ಬಂದಿದ್ದನ್ನು ಕಂಡು ಸ್ಥಳೀಯರು ಏನೋ ಆಯಿತು ಎಂದುಕೊಂಡು ಆತಂಕಕ್ಕೊಳಗಾಗಿದ್ದರು. ಇದನ್ನು ರಸ್ತೆ, ಕಡಲತೀರದಲ್ಲಿ ನಿಂತವರೆಲ್ಲ ಮೊಬೈಲ್ ಹಿಡಿದು ಫೋಟೋ, ವಿಡಿಯೋ ಮಾಡಿಕೊಂಡರು.
ಈ ಬಗ್ಗೆ ಕೋಸ್ಟ್ ಗಾರ್ಡ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಇದೊಂದು ಟ್ರಯಲ್ ಅಷ್ಟೇ. ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರ್ ಅನ್ನು ಎಲ್ಲೆಲ್ಲಿ ಸುರಕ್ಷಿತವಾಗಿ ಇಳಿಸಬಹುದು ಎಂಬ ಬಗ್ಗೆ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದೇವೆ. ಅಂಕೋಲಾದ ಹಟ್ಟಿಕೇರಿ, ಕಾರವಾರದ ನಗರ ಭಾಗದಲ್ಲಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.