ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಅವರು ನಾಯಕ ನಟನಾಗಿ ಅಭಿನಯಿಸಿದ್ದ ಕೊನೆಯ ಕಮರ್ಷಿಯಲ್ ಚಿತ್ರ ಜೇಮ್ಸ್ ಬಿಡುಗಡೆಯಾಗಿತ್ತು. ಯುವರತ್ನ ಚಿತ್ರದ ನಂತರ ತಮ್ಮ ನೆಚ್ಚಿನ ನಟನನ್ನು ಬೆಳ್ಳಿ ಪರದೆಯ ಮೇಲೆ ನೋಡಲು ಕಾದಿದ್ದ ಅಪ್ಪು ಫ್ಯಾನ್ಸ್ ಟಿಕೆಟ್ ಖರೀದಿಗಾಗಿ ಮುಗಿಬಿದ್ದು ಚಿತ್ರವನ್ನು ನೂರು ಕೋಟಿ ಕ್ಲಬ್ ಸೇರಿಸಿಯೇ ಬಿಟ್ಟರು. ನಂತರ ಅಪ್ಪು ದೇವರ ರೂಪದಲ್ಲಿ ಕಾಣಿಸಿಕೊಂಡ ಲಕ್ಕಿ ಮ್ಯಾನ್ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಗೊಂಡು ಸದ್ಯ ಚಿತ್ರಮಂದಿರದಲ್ಲಿ ರನ್ ಆಗ್ತಿದೆ. ಈ ಚಿತ್ರಕ್ಕೂ ಕೂಡ ಅಪ್ಪು ಸಂಪಾದಿಸಿರುವ ಅಭಿಮಾನಿ ದೇವರುಗಳು ಹಾಗೂ ಫ್ಯಾಮಿಲಿ ಆಡಿಯನ್ಸ್ ಅಟೆಂಡೆನ್ಸ್ ಹಾಕಿ ಚಿತ್ರ ವೀಕ್ಷಿಸಿದ್ದಾರೆ. ಹೀಗೆ ಅಪ್ಪು ನಿಧನದ ನಂತರ ಇನ್ನೂ 3 ಚಿತ್ರಗಳಿವೆ, ಆ ಚಿತ್ರಗಳನ್ನು ನಾವು ಚಿತ್ರಮಂದಿರದಲ್ಲಿ ನೋಡಿ ಅಪ್ಪುವನ್ನು ಸಂಭ್ರಮಿಸಬಹುದು ಎಂಬ ಯೋಜನೆಯಲ್ಲಿದ್ದ ಅಪ್ಪು ಅಭಿಮಾನಿಗಳಿಗೆ ಸದ್ಯ ಉಳಿದಿರುವುದು ಕೇವಲ ಇನ್ನೊಂದು ಚಿತ್ರ. ಅದುವೇ ಪುನೀತ್ ಕನಸಿನ ಕೂಸು ಗಂಧದ ಗುಡಿ.
ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಗೊಂಡಿದ್ದು, ಅಕ್ಟೋಬರ್ 28ರಂದು ಈ ಚಿತ್ರ ತೆರೆಕಾಣಲಿದೆ. ಇನ್ನು ಈ ಸಿನಿಮಾಗೆ ಸೆಲೆಬ್ರೇಷನ್ ದೊಡ್ಡಮಟ್ಟದಲ್ಲಿ ಇರಲಿದ್ದು, ತಿಂಗಳಿಗೂ ಮುನ್ನವೇ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಈ ಚಿತ್ರದ ತಯಾರಿಗಾಗಿ ಗಂಧದಗುಡಿ ಹಬ್ಬ ಎಂಬ ಕಾರ್ಯಕ್ರಮವನ್ನು ಬೆಂಗಳೂರಿನ ಕಮಲಾ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ನಾಳೆ ( ಸೆಪ್ಟೆಂಬರ್ 18 ) ಆಯೋಜನೆ ಮಾಡಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಎಲ್ಲಾ ಅಪ್ಪು ಅಭಿಮಾನಿಗಳಿಗೂ ಸ್ವಾಗತವನ್ನು ಕೋರಲಾಗಿದೆ.