ಕುಷ್ಟಗಿ: ತಾಲೂಕಿನ ತಾವರಗೇರಾ ಪಟ್ಟಣದ ಶ್ಯಾಮೀದ ಅಲಿ ದರ್ಗಾದ ಆವರಣ ವ್ಯಾಪ್ತಿಯಲ್ಲಿ ನಡೆಸಿರುವ ನೂತನ ಕಟ್ಟಡ ಕಾಮಗಾರಿ ನಿರ್ಮಾಣ ಕೆಲಸವನ್ನು ತಡೆಯುವಂತೆ ಆಗ್ರಹಿಸಿ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಕೆಲವು ದಿನಗಳಿಂದ ದರ್ಗಾ ವ್ಯಾಪ್ತಿಯ ಸ್ಥಳದಲ್ಲಿ ನೂತನ ಮಸೀದಿ ನಿರ್ಮಾಣ ಕೆಲಸ ನಡೆದಿದೆ. ಆದರೆ, ಪ್ರತಿದಿನ ರಾತ್ರಿ ಸಮಯದಲ್ಲಿ ಮಾತ್ರ ತಳಮಟ್ಟದ ನೆಲದ ತಗ್ಗು ತೆಗೆಯುವದು, ತರಗಲ್ಲು ಹಾಕುವದು ಹೀಗೆ ಕಾಮಗಾರಿ ಮಾಡುತ್ತಿದ್ದು, ಈ ಸ್ಥಳದಲ್ಲಿ ಐತಿಹಾಸಿಕ ಕುರುಹುಗಳು, ಪುರಾತನ ಮಾಹಿತಿ ತಿಳಿಸುವ ವಿವಿಧ ಕಲ್ಲುಗಳು, ಸುರಂಗ ಮಾರ್ಗ ಕಂಡು ಬಂದಿದೆ. ಆದ್ದರಿಂದ ಪಟ್ಟಣದ ವಿವಿಧ ಸಮುದಾಯದ ಮುಖಂಡರಿಂದ ದರ್ಗಾದಲ್ಲಿ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿದರು.
ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಮತ್ತು ತಹಶೀಲ್ದಾರ್ ಕಚೇರಿಗೆ ಮಾಹಿತಿ ಮತ್ತು ಅನುಮತಿ ಪಡೆಯದೇ ಈ ಕಾಮಗಾರಿ ನಿರ್ಮಾಣ ಮಾಡುತ್ತಿದ್ದಾರೆ. ಆದ್ದರಿಂದ ತಹಶೀಲ್ದಾರರು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ನಂತರ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿ, ಕಾಮಗಾರಿ ನಡೆದಿದೆ. ಆದರೆ ಯಾವ ಕಟ್ಟಡ ಎಂಬುದು ದಾಖಲಾತಿ ಮತ್ತು ಯೋಜನೆ ಮಾಹಿತಿ ಇಲ್ಲ. ತಹಶೀಲ್ದಾರರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಂದು ಪರಿಶಿಲನೆ ಮಾಡುವವರೆಗೆ ಕಾಮಗಾರಿ ಕೆಲಸ ಸ್ಥಗಿತ ಮಾಡುವಂತೆ ತಿಳಿಸಿದರು. ದರ್ಗಾದಲ್ಲಿ ನಡೆದ ಸಭೆ ನಂತರ ಕಂದಾಯ ಇಲಾಖೆಯ ಸೂರ್ಯಕಾಂತ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪಟ್ಟಣದ ವಿವಿಧ ಸಮುದಾಯದ ಮುಖಂಡರು, ಕಂದಾಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.