ಹುಬ್ಬಳ್ಳಿ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಕಾನೂನಿನ ಸಂಪೂರ್ಣ ರಕ್ಷಣೆ ಇದ್ದು, ತಾಕತ್ತಿದ್ದರೆ ಕಾಂಗ್ರೆಸ್ ಇದನ್ನು ವಿರೋಧಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇರ ಸವಾಲು ಹಾಕಿದರು. ಜೊತೆಗೆ ಬಂಜಾರ ಸಮುದಾಯದವರ ಮೀಸಲಾತಿಗೆ ಧಕ್ಕೆ ಇಲ್ಲ ಎಂಬ ಆದೇಶ ಪ್ರತಿಯನ್ನು ಪ್ರದರ್ಶಿಸಿದರು.
ಮೀಸಲಾತಿ ಪ್ರಮಾಣ ಏರಿಸಿದ್ದರ ಜೊತೆಗೆ, ಒಳ ಮೀಸಲಾತಿ ಕಲ್ಪಿಸಿದ ಸರ್ಕಾರವನ್ನು ಅಭಿನಂದಿಸಲು ಪರಿಶಿಷ್ಟ ಜಾತಿ ಸಮುದಾಯಗಳ ಒಕ್ಕೂಟ'ದ ವತಿಯಿಂದ ಇಲ್ಲಿನ ನೆಹರೂ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು. ಮೀಸಲು ಕುರಿತು ಕಾಂಗ್ರೆಸ್ ಅನುಸರಿಸುತ್ತಿರುವ ನಡೆ ಹಾಗೂ ನೀಡುತ್ತಿರುವ ಪ್ರತಿಕ್ರಿಯೆಗಳ ಕುರಿತು ಬೊಮ್ಮಾಯಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಸಿದ್ದರಾಮಯ್ಯನವರೇ, ನೀವು ಪರಿಶಿಷ್ಟ ಜಾತಿ ಪಂಗಡಗಳಿಗೆ ಮೀಸಲಾತಿ ನೀಡುವುದರ ಪರ ಇದ್ದೀರೋ ಇಲ್ಲವೋ; ಒಳ ಮೀಸಲಾತಿಗೆ ನಿಮ್ಮ ವಿರೋಧ ಇದೆಯೇ ಎಂಬ ನಮ್ಮ ಏಕೈಕ ಪ್ರಶ್ನೆಗೆ ಉತ್ತರಿಸಿ’ ಎಂದು ಪಂಥಾಹ್ವಾನ ನೀಡಿದರು.