ತಪ್ಪುಗಳನ್ನು ಮುಚ್ಚಿಹಾಕುವುದು ಕಾಂಗ್ರೆಸ್ ನೈತಿಕತೆ

Advertisement

ಚಿಕ್ಕಮಗಳೂರು: ಲೋಕಾಯುಕ್ತಕ್ಕೆ ಮುಕ್ತ ಅಧಿಕಾರ ನೀಡಿ ಯಾರೇ ತಪ್ಪು ಮಾಡಿದರೂ ಕೂಡ ನಾವು ಕ್ರಮ ತೆಗೆದುಕೊಳ್ಳಲು ಸಿದ್ದ ಎನ್ನುವುದು ನಮ್ಮ ನೈತಿಕತೆ. ತಪ್ಪುಗಳನ್ನು ಮುಚ್ಚಿಹಾಕುವುದು ಕಾಂಗ್ರೆಸ್ ನೈತಿಕತೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬಾಳೆಹೊನ್ನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಿಎಂ ರಾಜೀನಾಮೆ ಕೇಳುತ್ತಿರುವ ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಗಳಿದ್ದಾಗ ಅವರ ಸಚಿವರ ಕಚೇರಿಯಲ್ಲಿ 25 ಲಕ್ಷ ರೂ. ಲಂಚ ಪಡೆಯುತ್ತಿರುವಾಗ ಸಿಕ್ಕಿಹಾಕಿಕೊಂಡಿದ್ದರು. ಅಂದು ಅವರು ರಾಜಿನಾಮೆ ನೀಡಲಿಲ್ಲ. ಲೋಕಾಯುಕ್ತ ಇದ್ದಿದ್ದರೆ ಅವರ ಮೇಲೆ ಪ್ರಕರಣ ದಾಖಲಾಗುತ್ತಿತ್ತು. ಅವರು ಭ್ರಷ್ಟಾಚಾರ ಮುಚ್ಚಿಹಾಕಲು ಪ್ರಯತ್ನ ಮಾಡಿದರು ಎಂದರು.
ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ಮತ್ತೆ ಅಧಿಕಾರಕ್ಕೆ ಬರಬೇಕಿದೆ
ಕಾಂಗ್ರೆಸ್ ಎಲ್ಲೆಡೆ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮಾತನಾಡಿ ಜನರಿಗೆ ಗೊತ್ತಿದೆ. ಯಾರು, ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ, ತಪ್ಪು ಗಳನ್ನು ಮುಚ್ಚಿಹಾಕಿಕೊಳ್ಳಲು ಮತ್ತೆ ಅಧಿಕಾರಕ್ಕೆ ಬರಬೇಕೆಂದು ಇವರು ಇದನ್ನು ಮಾಡುತ್ತಾರೆ. ಕಾಂಗ್ರೆಸ್ ಮಾಡಿದ ಕರ್ಮಕಾಂಡ ಯಾರೂ ಮರೆತಿಲ್ಲ. ಕೊಲೆ, ಸುಲಿಗೆ, ಭ್ರಷ್ಟಾಚಾರ, ಲೂಟಿ ಮಾಡಿದ್ದಾರೆ. ಅವರ ಕಾಲದ 59 ಕೇಸ್ ಲೋಕಾಯುಕ್ತಕ್ಕೆ ವಹಿಸಿದ್ದು ಸತ್ಯ ಹೊರಗೆ ಬರಲಿದೆ ಎಂದರು.
ತನಿಖೆಯಾಗಲಿ
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ರಾಜೀನಾಮೆ ಪಡೆಯುವ ಬಗ್ಗೆ ಉತ್ತರಿಸಿ ಈ ಬಗ್ಗೆ ತೀರ್ಮಾನ ವಾಗಿಲ್ಲ. ಲೋಕಾಯುಕ್ತಕ್ಕೆ ಸರ್ವ ಸ್ವಾತಂತ್ರ್ಯ ನೀಡಿದ್ದು ನಿರ್ಭಿಡೆ, ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಾರೆ. ಮಾಡಲಿ ಎನ್ನುವುದಷ್ಟೇ ನಮ್ಮ ಉದ್ದೇಶ ಎಂದರು.
ಅಧಿಕಾರದ ಲಾಲಸೆ
ರಾಯಗಡದಲ್ಲಿ ಉದ್ಘಾಟನೆಯಾದ ಶಿವಾಜಿ ಪ್ರತಿಮೆ ಬಗ್ಗೆ ಕಾಂಗ್ರೆಸ್ ನವರು ಉದ್ಘಾಟಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿ ಇದು ನಿಜಕ್ಕೂ ಹಾಸ್ಯಾಸ್ಪದ. ಸರ್ಕಾರ ನಿರ್ಮಿಸಿರುವ ಪ್ರತಿಮೆಯಾಗಿದ್ದು, ಅಧಿಕೃತ ಉದ್ಘಾಟನೆಯಾದ ಮೇಲೆ ಭೇಟಿ ಕೊಡಬಹುದು. ಆದರೆ ಉದ್ಘಾಟನೆಯಾದ ನಂತರ ಪುನಃ ಉದ್ಘಾಟಿಸಿಸುವುದು ಕೇಳಿಯೇ ಇಲ್ಲ. ಅಧಿಕಾರದ ಹೊರಗಿದ್ದರೂ, ಅಧಿಕಾರದ ಲಾಲಸೆ ಹಾಗೂ ಹತಾಶ ಭಾವ ಎಷ್ಟಿದೆ ಎಂದು ಸ್ಪಷ್ಟವಾಗುತ್ತದೆ ಎಂದರು.
ಬಂಧನ
ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಎನ್.ಐ.ಎ. ಬಂಧಿಸಿದ್ದು , ಈ ಬಗ್ಗೆ ಮುಂಚೆಯೇ ಮಾಹಿತಿ ನೀಡಲಾಗಿತ್ತು.ಇದರ ಜಾಡು ಹಿಡಿದು ಈ ಪ್ರಕರಣದ ಹಿಂದಿರುವವರನ್ನು ಬಂಧಿಸಿದ್ದಾರೆ ಎಂದರು.