ತಂದೆ ಸಾಲಕ್ಕೆ ಮಗನಿಂದ ಬೆತ್ತಲೆ ಪೂಜೆ ಮಾಡಿಸಿದ ಖದೀಮರು…!

ಬೆತ್ತಲೆ ಪೂಜೆ
Advertisement

ಕೊಪ್ಪಳ: ತಂದೆ ಮಾಡಿದ ಸಾಲದಿಂದ ವಿಮುಕ್ತರಾಗುತ್ತೀರಿ ಎಂದು ಮಗನಿಂದ ಬೆತ್ತಲೆ ಪೂಜೆ ಮಾಡಿಸಿದ ಅಮಾನವೀಯ ಘಟನೆ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ನಡೆದಿದೆ.
ಮಾನವ ಸಮಾಜವೇ ತಲೆ ತಗ್ಗಿಸುವ ಘಟನೆ ಕಳೆದ ಎರಡು ತಿಂಗಳ ಹಿಂದೆಯೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಬಾಲಕ ಬೆತ್ತಲೆ ಪೂಜೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದರಿಂದಾಗಿ ಬಾಲಕ ಅವಮಾನಕ್ಕೆ ಒಳಗಾಗಿದ್ದಾನೆ. ಹಾಸಗಲ್ ಗ್ರಾಮದ ೧೬ ವಯಸ್ಸಿನ ಬಾಲಕನಿಗೆ ಆರೋಪಿಗಳಾದ ಶರಣಪ್ಪ ತಳವಾರ, ವಿರುಪನಗೌಡ ಮತ್ತು ಶರಣಪ್ಪ ಓಜನಹಳ್ಳಿ ಈ ಕೃತ್ಯ ಮಾಡಿಸಿದ್ದು, ಇವರ ವಿರುದ್ಧ ಬಾಲಕನ ತಂದೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎರಡು ತಿಂಗಳ ಹಿಂದೆ ಜೆಜೆಎಂ ಕೂಲಿ ಕೆಲಸಕ್ಕಾಗಿ ಬಾಲಕನನ್ನು ಆರೋಪಿಗಳು ಹುಬ್ಬಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ನಿನ್ನ ತಂದೆ ಸಾಲ ಮಾಡಿದ್ದು, ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಬೇಕಾದರೆ ಬೆತ್ತಲೆ ಪೂಜೆ ಮಾಡಬೇಕು ಎಂದು ಬಾಲಕನನ್ನು ಪ್ರಚೋದಿಸಿದ್ದಾರೆ. ಇದನ್ನು ನಂಬಿದ ಬಾಲಕ ಬೆತ್ತಲೆ ಪೂಜೆ ಮಾಡಿದ್ದು, ಆರೋಪಿಗಳು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಬೆತ್ತಲೆ ಪೂಜೆ ಮಾಡಿಸಿರುವುದನ್ನು ಯಾರಿಗಾದರು ಹೇಳಿದರೆ ನಿನ್ನ ಮತ್ತು ನಿನ್ನ ತಂದೆಯನ್ನು ಕೊಲೆ ಮಾಡುತ್ತೇವೆ ಎಂದು ಬಾಲಕನಿಗೆ ಬೆದರಿಕೆಯನ್ನು ಆರೋಪಿಗಳು ಹಾಕಿದ್ದಾರೆ. ಈಗಾಗಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.