ಬೆಳಗಾವಿ(ಮೋಳೆ): ಕ್ಷುಲ್ಲಕ ಕಾರಣಕ್ಕಾಗಿ ತಂದೆಯೋರ್ವ ಹೆತ್ತ ಮಗನನ್ನೇ ಕೊಲೆ ಮಾಡಿದ ಘಟನೆ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ನಡೆದಿದೆ.
ಭರತೇಶ ಉರ್ಫ ಚೇತನ ಖಾಂಜೆ(30) ಎಂಬ ಯುವಕ ತಂದೆಯಿಂದಲೇ ಕೊಲೆಗೀಡಾಗಿದ್ದಾನೆ. ತಂದೆ ಜಿನ್ನಪ್ಪ ಪಾಯಪ್ಪ ಖಾಂಜೆ (64) ಕೊಲೆ ಮಾಡಿರುವ ಆರೋಪಿ.
ಏನಿದು ಪ್ರಕರಣ: ಭರತೇಶ 30 ವರ್ಷವಾದರು ದುಡಿಯದೇ ಕುಡಿತದ ದಾಸನಾಗಿ ಪ್ರತಿದಿನ ಮನೆಯಲ್ಲಿ ತಂದೆ ತಾಯಿಗೆ ಹಣ ನೀಡುವಂತೆ ಪೀಡಿಸುತ್ತಿದ್ದ. ಹಣಕ್ಕಾಗಿ ಪ್ರತಿದಿನ ಜಗಳವಾಡುತಿದ್ದ. ಮಂಗಳವಾರವೂ ಇದೇ ವಿಷಯಕ್ಕೆ ಅಪ್ಪ-ಮಗನ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿ ರೊಚ್ಚಿಗೆದ್ದ ತಂದೆ ಜಿನ್ನಪ್ಪ ಖಾಂಜೆ ಕೊಡಲಿಯಿಂದ ಮಗನನ್ನು ಕೊಲೆ ಮಾಡಿದ್ದಾನೆ. ಘಟನೆಯ ನಂತರ ಆರೋಪಿ ಸ್ವತಃ ಪೊಲೀಸ್ ಠಾಣೆಗೆ ಹೋಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.