ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆಗೆ ಕೇಂದ್ರದಿಂದ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ, ಇಂದು ಹುಬ್ಬಳ್ಳಿ- ಧಾರವಾಡ ನಗರ ಹಾಗೂ ಧಾರವಾಡ ಗ್ರಾಮಾಂತರ ರೈತ ಮೋರ್ಚಾದ ಸದಸ್ಯರು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬೃಹತ್ ಅಭಿನಂದನಾ ಸಮಾರಂಭ ಹಾಗೂ ವಿಜಯೋತ್ಸವ ರ್ಯಾಲಿ ಬಿಜೆಪಿಯಿಂದ ನಗರದಲ್ಲಿ ಭಾನುವಾರ ನಡೆಯಿತು.
ನೆಹರು ಮೈದಾನದಿಂದ ಹೊರಟ ರ್ಯಾಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಲ್ಯಾಮಿಂಗ್ಟನ್ ರಸ್ತೆ, ಸಿದ್ದಪ್ಪ ಕಂಬಳಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ ಹಾದು ಚನ್ನಮ್ಮ ವೃತ್ತ ತಲುಪಿತು. ಜಾನಪದ ಕಲಾ ತಂಡಗಳು ಹಾಗೂ ಡೊಳ್ಳು ವಾದ್ಯ ಮೆರಗು ತಂದಿತು. ಸಚಿವ ಜೋಶಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕರ್ತರು ರ್ಯಾಲಿ ಉದ್ದಕ್ಕೂ ಭಾರತ ಮಾತಾಕೀ ಜೈ ಎಂದು ಘೋಷಣೆ ಕೂಗಿದರು. ಪ್ರಲ್ಹಾದ ಜೋಶಿ ಅವರಿಗೆ ಜೈಕಾರ ಹಾಕುತ್ತಾ ಸಾಗಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದರು.