ಟಿಕೆಟ್‌ಗಾಗಿ ಕಿತ್ತಾಟ ಬೇಡ

ಸತೀಶ ಜಾರಕಿಹೊಳಿ
ಮುಧೋಳದಲ್ಲಿ ನಡೆದ ಕಾಂಗ್ರೆಸ್ ಪಾದಯಾತ್ರೆ ಸಮಾರೋಪದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತಾಡಿದರು.
Advertisement

ಮುಧೋಳ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗುವ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಮುಧೋಳ ಮತಕ್ಷೇತ್ರದಲ್ಲಿ ಪಕ್ಷದಿಂದ ಯಾರೇ ಅಭ್ಯರ್ಥಿ ಸ್ಪರ್ಧಿಸಲಿ. ವೈಯಕ್ತಿಕ ಹಿತಾಸಕ್ತಿ ನೋಡದೆ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು. ಇಲ್ಲದಿದ್ದರೆ ಮತ್ತೆ ೨೦೧೮ರ ಫಲಿತಾಂಶ ಮರುಕಳಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕೈ ಮುಖಂಡರಿಗೆ ಎಚ್ಚರಿಕೆ ಸಂದೇಶ ನೀಡಿದರು.
೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮುಧೋಳ ಮತ್ತು ಲೋಕಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೆಳಗಲಿ ಗ್ರಾಮದಿಂದ ಮುಧೋಳದವರೆಗೆ ಹಮ್ಮಿಕೊಂಡ ಪಾದಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಮುಧೋಳ ಮತಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ದಿಂದ ಇಬ್ಬರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಹೈಕಮಾಂಡ್ ಯಾರಿಗಾದರೂ ಟಿಕೆಟ್ ನೀಡಲಿ. ಆ ಅಭ್ಯರ್ಥಿ ಪರ ಪ್ರಚಾರ ಮಾಡಿ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಬೇಕು. ಆದರೆ ಟಿಕೆಟ್‌ಗಾಗಿ ಕಿತ್ತಾಟ ಮಾಡಬಾರದು ಎಂದು ಪರೋಕ್ಷವಾಗಿ ಆರ್.ಬಿ. ತಿಮ್ಮಾಪುರ ಮತ್ತು ಸತೀಶ ಬಂಡಿವಡ್ಡರ ಅವರಿಗೆ ಹೇಳಿದರು.
ಆರ್.ಬಿ. ತಿಮ್ಮಾಪುರ ಮತ್ತು ಸತೀಶ ಬಂಡಿವಡ್ಡರ ನೀವಿಬ್ಬರೂ ಮಹಾನ್ ನಾಯಕರು ಇಲ್ಲೇ ಇದ್ದೀರಿ. ನಾನು ಹೇಳಿದ್ದನ್ನು ತಾವು ಅರ್ಥೈಸಿಕೊಳ್ಳಬೇಕು. ನೀವಿಬ್ಬರೂ ಒಗ್ಗಟ್ಟಿನಿಂದ ಕೈಹಿಡಿದು ಓಡಬೇಕು. ನೀವಿಬ್ಬರೂ ಓಡದೇ ಹೋದರೆ ಸಚಿವ ಗೋವಿಂದ ಕಾರಜೋಳ ಅವರು ರಿವರ್ಸ್ ಓಡಿ ಗೆಲ್ತಾರೆ. ಕಾರಜೋಳ ಮುಂದೆ ಓಡಿ ಗೆಲ್ಲೋದಲ್ಲ ನಿಮ್ಮನ್ನು ಹಿಂದಕ್ಕೆ ಓಡಿಸಿ ಸೋಲಿಸುತ್ತಾರೆ. ನಿಮ್ಮಿಬ್ಬರಲ್ಲಿ ಶಕ್ತಿ ಇದೆ. ಎಲ್ಲರೂ ಒಗ್ಗಟ್ಟಿನಿಂದ ಗೆಲ್ಲಬೇಕೆಂದು ಹೇಳಿದರು.

ಸತೀಶ ಜಾರಕಿಹೊಳಿ
ಮುಧೋಳದಲ್ಲಿ ನಡೆದ ಕಾಂಗ್ರೆಸ್ ಪಾದಯಾತ್ರೆ ಸಮಾರೋಪದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತಾಡಿದರು.