ಹುಬ್ಬಳ್ಳಿ : ಜನವರಿ 2 ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ವಿಚಾರವಾಗಿ ಹೋರಾಟ ಸಮಾವೇಶ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ಇಲ್ಲಿನ ವಿಮಾನ ನಿಲ್ಲಾಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸುರ್ಜೆವಾಲಾ ನೇತೃತ್ವದಲ್ಲಿ ಸಭೆ ನಡೆಸಿ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಬಸ್ ಯಾತ್ರೆ ಶೀಘ್ರದಲ್ಲೇ ಆರಂಭಿಸಲಾಗುವುದು. ಇದಕ್ಕೆ ಪಕ್ಷದ ಯಾವ ನಾಯಕರು ಷರತ್ತು ಹಾಕಿಲ್ಲ. ಎಲ್ಲರೊಂದಿಗೆ ಚರ್ಚಿಸಿಯೇ ಈ ತೀರ್ಮಾನ ಕೈಗೊಳ್ಳಲಾಗಿದೆ.
ಡಿ. 30ರಂದು ಕೃಷ್ಣಾ ನದಿ ನೀರು ಹಂಚಿಕೆ ಕುರಿತು ವಿಜಯಪುರದಲ್ಲಿ ಹಾಗೂ ಜ. 2ರಂದು ಮಹಾದಾಯಿ ಯೋಜನೆ ಅನುಷ್ಠಾನ ಕುರಿತು ಹುಬ್ಬಳ್ಳಿಯಲ್ಲಿ ಹಾಗೂ ಜ. 8ರಂದು ಎಸ್ಸಿ, ಎಸ್ಟಿ ಮೀಸಲಾತಿ ಬಗ್ಗೆ ಚಿತ್ರದುರ್ಗದಲ್ಲಿ ಸಭೆ ನಡೆಸಲಾಗುವುದು ಎಂದು ಡಿ.ಕೆ. ಶಿವಕುಮಾರ ಹೇಳಿದರು.
ಕಾಂಗ್ರೆಸ್ ಯಾವಾಗಲೂ ಭಯೋತ್ಪಾದನೆ ವಿರೋಧಿಸುತ್ತ ಬಂದಿದೆ. ಇಂತಹ ಕೃತ್ಯಗಳಿಂದಾಗಿ ನಾವು ಪಕ್ಷದ ಹಲವು ನಾಯಕರನ್ನು ಕಳೆದುಕೊಂಡಿದ್ದೇವೆ. ಘಟನೆಯನ್ನು ಖಂಡಿಸುತ್ತದೆ. ಆದರೆ ಕನಿಷ್ಠ ಮಟ್ಟದ ತನಿಖೆ ನಡೆಯದೇ ಪ್ರಕರಣವನ್ನು ಭಯೋತ್ಪಾದಕ ಕೃತ್ಯ ಎಂದು ಬಿಂಬಿಸಿರುವುದರ ಹಿಂದೆ ವಿಷಯಾಂತರ ಮಾಡುವುದಾಗಿತ್ತು. ಇದನ್ನು ಹೇಳಿದ್ದೇನೆ. ಆರೋಪಿ ಕೃತ್ಯ ವನ್ನು ಬೆಂಬಲಿಸಿಲ್ಲ ಎಂದರು.