ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ಪಕ್ಷದ ಮೊದಲ ಪಟ್ಟಿಯಲ್ಲಿ ಕೆಲ ಬದಲಾವಣೆಯಾಗಲಿವೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.
ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೋ ಬೇಡವೋ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಬಿಜೆಪಿಯ ಎ. ಮಂಜು ಜೆಡಿಎಸ್ ಸೇರಿದ್ದು, ಪ್ರಸಕ್ತ ಚುನಾವಣೆಯಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಬೇರೆ ಬೇರೆ ಪಕ್ಷಗಳ ಸಜ್ಜನ ಅಭ್ಯರ್ಥಿಗಳು ನಮ್ಮ ಪಕ್ಷ ಸೇರುತ್ತಿದ್ದಾರೆ ಎಂದರು.
ಇಲ್ಲಿನ ಈದ್ಗಾ ಮೈದಾನದಲ್ಲಿ ಗಣಪತಿ ಕೂರಿಸಿ ಬಿಜೆಪಿಗರು ಪೂಜೆ ಮಾಡಿದ್ದಾರೆ. ಬೈರಿದೇವರಕೊಪ್ಪದ ದರ್ಗಾ ತೆರವು ಮಾಡಿದ್ದಾರೆ. ಇದರಿಂದ ಅವರಿಗೆ ಏನು ಸಿಕ್ಕಿತ್ತು? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ಧ ಕಿಡಿ ಕಾರಿದರು. ಕೆಂದ್ರ ಸಚಿವ ಪ್ರಹ್ಲಾದ ಜೋಶಿ ಜನರ ಮನಸ್ಸಿನಲ್ಲಿ ಗಣಪತಿ ಕೂಡಿಸಬೇಕಿತ್ತು. ಆ ಕೆಲಸವನ್ನು ಮಾಡದೇ, ಶಾಸಕ ಅರವಿಂದ ಬೆಲ್ಲದ ಅವರ ಜಾಗವನ್ನು ಉಳಿಸಲು ದರ್ಗಾ ತೆರವು ಮಾಡಿದ್ದಾರೆ. ಮುಂದೆ ಈ ರೀತಿ ಕೆಲಸ ಮಾಡಬೇಡಿ ಎಂದು ಎಚ್ಚರಿಸಿದರು.
ಇತ್ತೀಚೆಗೆ ಕೆಂದ್ರ ಸಚಿವ ಪ್ರಹ್ಲಾದ ಜೋಶಿ ಕುಮಾರಸ್ವಾಮಿಯವರು ಮಾಡುತ್ತಿರುವ ಪಂಚರತ್ನ ಯಾತ್ರೆ ಬಗ್ಗೆ ಜೆಡಿಎಸ್‌ನವರು ನವಗ್ರಹ ಹೋಮ ಮಾಡಿಸಲಿ ಎಂಬ ಹೇಳಿಕೆಗೆ ಪ್ರತಿಕ್ರಿಸಿದ ಅವರು, ಜೋಶಿಯವರೆ ನಾವು ನವಗ್ರಹ ಪೂಜೆ ಮಾಡಲೇಬೇಕು. ನಿಮ್ಮ ಸಹೋದರ ಬ್ಯಾಂಕ್‌ನಲ್ಲಿ ಮಾಡಿದ ಅವ್ಯವಹಾರ ಕುರಿತು ಯಾಕೆ ಸುಮ್ಮನೆ ಇದ್ದಾರೆ. ನಮ್ಮ ಪಕ್ಷದ ತಂಟೆಗೆ ಬಂದರೆ ಅವರ ಕುಟುಂಬದ ಬಗ್ಗೆ ನಾವು ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಡುಬ್ಲಿಕೇಟ್ ಶೆಟ್ಟಿ ಆಗಿದ್ದಾರೆ. ಜೋಶಿ, ಶೆಟ್ಟರ್ ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದು ಗೊತ್ತಿದೆ. ನಮ್ಮ ಸರ್ಕಾರ ಬರಲಿ. ಇವರದ್ದು ಎಲ್ಲ ಹೊರಗಡೆ ಬರುತ್ತದೆ. ಎಂದರು.
ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ದೇವೇಗೌಡರ ವಿರುದ್ಧ ಒಮ್ಮೆಯೂ ಮಾತನಾಡಲಿಲ್ಲ, ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಅವರನ್ನು ಇಟ್ಟುಕೊಂಡು ಹಾಲಲ್ಲಿ ವಿಷ ಹಾಕತ್ತಿದ್ದಾರೆ. ಹುಮನಾಬಾದ್‌ನಲ್ಲಿ ನನ್ನ ಮಗ ಹಾಗೂ ಬಿಜೆಪಿಗೆ ನೇರ ಹಣಾಹಣಿ ಇದೆ. ಅಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಇದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಗೊತ್ತಿದೆ. ಹೀಗಾಗಿ ನನ್ನ ಮಗ ಆ ಕ್ಷೇತ್ರದಲ್ಲಿ ಗೆಲ್ಲಲಿದ್ದಾನೆ. ಈ ಮೂಲಕ ಜನತಾದಳ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಪ್ರತಿಕ್ರಿಯೆ ನೀಡಿ, ಯಡಿಯೂರಪ್ಪ ಇಲ್ಲದೇ ಸಿದ್ದರಾಮಯ್ಯ ಗೆಲ್ಲಲು ಆಗಲ್ಲ. ಹೀಗಾಗಿ ಯಡಿಯೂರಪ್ಪ ಕೋಲಾರದಲ್ಲಿ ನಿಲ್ಲುವುದು ಬೇಡ ಎಂದಿದ್ದಾರೆ. ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಇಬ್ಬರು ಒಂದೇ. ನಾನು ಕೂಡ ಸಿದ್ದರಾಮಯ್ಯನವರಿಗೆ ಕೋಲಾರದಿಂದ ಸ್ಪರ್ಧಿಸುವುದು ಬೇಡ ಎಂದಿದ್ದೇನೆ ಎಂದರು.
೧೩ ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ರಚಿಸಿದ ಬಿಜೆಪಿ
ರಾಜ್ಯದಲ್ಲಿ ಬಿಜೆಪಿ ೧೩ ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ರಚಿಸಿದೆ. ಇವರಿಗೆ ನಾಚಿಕೆ ಆಗಬೇಕು. ಕೂಡಲೇ ಬಸವರಾಜ ಬೊಮ್ಮಾಯಿ ರಾಜೀನಾಮೆ ಕೊಟ್ಟು ಹೊರಗಡೆ ಬರಬೇಕು. ಈ ಹಿಂದೆ ೧೩ ಜನರಲ್ಲಿ ೧೨ ಜನ ಮಂತ್ರಿ ಆಗಿದ್ದಾರೆ. ಇದರಲ್ಲಿ ಮಂತ್ರಿ ಸ್ಥಾನ ಕಳೆದುಕೊಂಡ ರಮೇಶ ಜಾರಕಿಹೊಳಿ ಸಿಡಿ ತೆಗೆದುಕೊಂಡು ಕೇಂದ್ರ ಗೃಹ ಸಚಿವರ ಬಳಿ ಹೋಗಿದ್ದಾರೆ. ಇದೀಗ ಮಕ್ಕಳು ಸಹ ಮನೆಯಲ್ಲಿ ಸಿಡಿ ಎಂದರೆ ಏನೂ ಎಂದು ಪ್ರಶ್ನೆ ಮಾಡತ್ತಿದ್ದಾರೆ. ಇದಕ್ಕೆ ಬಿಜೆಪಿಯವರು ಉತ್ತರ ಕೊಡತ್ತಾರಾ? ನಾವೇ ಉತ್ತರ ಕೊಡಬೇಕಾ? ಎಂದರು.
ಬಸವರಾಜ ಬೊಮ್ಮಾಯಿ ಇಂತಹ ಪಾಪಿಗಳನ್ನು ಕಟ್ಟಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಕೂಡಲೇ ಸದಾನಂದಗೌಡ ಹಾಗೂ ೧೨ ಜನರ ಕ್ಯಾಸೆಟ್ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನೀವು ರಾಜೀನಾಮೆ ಕೊಡಲು ಸಿದ್ದಾರಾಗಬೇಕು. ಪಿಟೀಲು ಬಾರಿಸುತ್ತಿರುವ ನಳೀನಕುಮಾರ ಕಟೀಲ್ ರಸ್ತೆ ಬೇಡ ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಿದ್ದಾರೆ. ಇವರಿಗೆ ಅಭಿವೃದ್ಧಿ ಬೇಡ ಧರ್ಮ ಧರ್ಮಗಳ ನಡುವೆ ಮನಸ್ತಾಪ ಮೂಡಸುವುದು ಬೇಕಿದೆ ಎಂದು ಕಿಡಿ ಕಾರಿದರು.
ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಕೊಡಿಸಲಾಗಿದೆ. ಇದರ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.