ಧಾರವಾಡ: ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ, ಜೀವನವನ್ನು ಸಮರ್ಥವಾಗಿ ಎದುರಿಸುವ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ಶಿಕ್ಷಣತಜ್ಞ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಾ. ಗುರುರಾಜ ಕರ್ಜಗಿ ಹೇಳಿದರು.
ಅವರು ರಪಾಟಿ ಕಲ್ಯಾಣ ಮಂಟಪದಲ್ಲಿ ನಡೆದ 29ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನದ ಯುವಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ನಾತಕೋತ್ತರ ಪದವಿ ಪಡೆದರೂ ಬಹುತೇಕರಿಗೆ ಆತ್ಮವಿಶ್ವಾಸ ಇರುವುದಿಲ್ಲ. ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿಯೇ ಬದುಕುವವರೇ ಹೆಚ್ಚು. ಆದರೆ ಹೆಚ್ಚು ಶಿಕ್ಷಣ ಪಡೆಯದ ಗಾರೆ ಕೆಲಸ ಮಾಡುವವರು, ಇಲೆಕ್ಟ್ರಿಕಲ್ ಕೆಲಸ ಮಾಡುವವರು ಆತ್ಮವಿಶ್ವಾಸದಿಂದ ಬದುಕುತ್ತಾರೆ ಎಂದರು.
ಶಿಕ್ಷಣ ಮೌಲ್ಯ ಕಳೆದುಕೊಂಡಿದೆ ಎಂಬುದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಶಿಕ್ಷಣದ ಗುಣಮಟ್ಟ ಕಡಿಮೆ ಆಗಿಲ್ಲ. ಕೇವಲ ಗುರಿ ಬದಲಾಗಿದೆ. ವೇದ ಕಾಲದಲ್ಲಿ ಜ್ಞಾನ ಪ್ರಧಾನವಾಗಿತ್ತು. ಮಹಾಭಾರತ ಕಾಲದಲ್ಲಿ ಶೌರ್ಯ ಪ್ರಧಾನವಾಯಿತು. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ದೇಶಪ್ರೇಮ ಆದರ್ಶ ಆಯಿತು. ಆದರೆ ಸ್ವಾತಂತ್ರ್ಯ ನಂತರ ಶ್ರೀಮಂತಿಕೆ ಮಾದರಿಯಾಗಿದೆ. ಹಣ ಗಳಿಸಬೇಕು ಎಂಬ ಹಪಾಹಪಿ ಹೆಚ್ಚಾಗಿದೆ ಎಂದರು.
ಇಂಥದೇ ಕೋರ್ಸ್ ಓದಿ ಹೆಚ್ಚು ಸಂಬಳದ ಉದ್ಯೋಗ ಪಡೆದು ಶ್ರೀಮಂತನಾಗು ಎಂದು ಪಾಲಕರೇ ಮಕ್ಕಳನ್ನು ದುಡ್ಡಿನ ಬೆನ್ನು ಹತ್ತಿಸಿದ್ದಾರೆ. ಇದು ಬದಲಾಗಬೇಕು. ಯಾವುದನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲವೋ ಅದುವೇ ತತ್ವಜ್ಞಾನದ ಮೌಲ್ಯ. ಹೀಗಾಗಿ ಶಿಕ್ಷಣದಲ್ಲಿ ಅಧ್ಯಾತ್ಮ ಜ್ಞಾನವನ್ನು ಬೆರೆಸಿ ಮಕ್ಕಳಿಗೆ ನೀಡುವ ಕೆಲಸ ಆಗಬೇಕು. ತಂತ್ರಜ್ಞಾನ ಬಳಸಿ ತತ್ವಜ್ಞಾನ ಬೆಳೆಸಬೇಕು. ಅಂದಾಗ ತತ್ವಜ್ಞಾನದ ಜತೆಗೆ ಸಂಸ್ಕಾರ, ತಂತ್ರಜ್ಞಾನ, ವಿಜ್ಞಾನವೂ ಬೆಳೆಯಲಿದೆ ಎಂದು ತಿಳಿಸಿದರು.
ಡಾ. ಸಾಗರ ಭಟ್ ಅವರು “ತತ್ವ ಪ್ರಸಾರಕ್ಕೆ ತಂತ್ರಜ್ಞಾನ’, ರಾಮಚಂದ್ರ ಪಂಢರಿ ಅವರು “ತತ್ವ ಪ್ರಚಾರಕ್ಕೆ ತಂತ್ರಜ್ಞಾನ’ ಹಾಗೂ ಐತರೇಯ ಆಚಾರ್ಯ ಭರದ್ವಾಜ ಅವರು “ಶಿಕ್ಷಣದಲ್ಲಿ ಮೌಲ್ಯ’ ಎಂಬ ವಿಷಯ ಮಂಡಿಸಿದರು. ಡಾ. ಆರ್.ವೈ. ಕಟ್ಟಿ ಗೋಷ್ಠಿ ನಿರ್ವಹಿಸಿದರು.