ಬೆಳಗಾವಿ: ಗಾಳಿಪಟ ಹಾರಿಸುವ ಗೀಳು ಬಾಲಕನ ಜೀವಕ್ಕೆ ಕುತ್ತು ತಂದ ದಾರುಣ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ದಸರಾ ರಜೆ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿನ ಉಜ್ವಲ ನಗರದ ತಿರಂಗಾ ಕಾಲನಿಯ ನಿವಾಸಿ ಅರ್ಮಾನ್ ದಪೇದಾರ್(೧೧) ಎಂಬ ಬಾಲಕ ಕುಟುಂಬದವರೊಂದಿಗೆ ಅಶೋಕ ನಗರದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದಾನೆ.
ಅಲ್ಲಿ ಸಹೋದರನ ಜತೆಗೆ ಮನೆಯ ತಾರಸಿಯ ಮೇಲೆ ಇಬ್ಬರೂ ಗಾಳಿಪಟ ಹಾರಿಸಲು ಮುಂದಾಗಿದ್ದಾರೆ. ಆಕಾಶದ ಎತ್ತರಕ್ಕೆ ಹಾರುತ್ತಿರುವ ಗಾಳಿಪಟವನ್ನು ಕಂಡು ಇಬ್ಬರೂ ಮೈ ಮರೆತು ಕುಣಿದಿದ್ದಾರೆ. ಇನ್ನೂ ಬಾನೆತ್ತರಕ್ಕೆ ಪಟ ಹಾರಿಸುತ್ತಾ ಹಗ್ಗ ಜಗ್ಗುವ ವೇಳೆ ಆಯತಪ್ಪಿದ ಬಾಲಕ ಅರ್ಮಾನ್ ಮೇಲಿನಿಂದ ಕೆಳಕ್ಕೆ ಬಿದ್ದಿದ್ದಾನೆ.
ತೀವ್ರ ಗಾಯಗೊಂಡ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮುಂಜಾನೆ ಕೊನೆಯುಸಿರೆಳೆದಿದ್ದಾನೆ. ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.