ಪ್ರತಿಯೊಬ್ಬರೂ ತಮ್ಮ ತಮ್ಮ ತಂದೆ ತಾಯಿಯರನ್ನು ಪ್ರೀತಿಯಿಂದ ಹಾರೈಕೆ ಮಾಡಿದರೆ ವೃದ್ಧಾಶ್ರಮಗಳ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ವೃದ್ಧರನ್ನು ಪ್ರೀತಿ ಗೌರವದಿಂದ ಕಾಣಿ ಎನ್ನುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಕಣ್ಣಿಗೆ ಕಾಣಿಸಿತು.
ಹೌದು.. ಈ ಮಾತು ಸತ್ಯ ತಂದೆ ತಾಯಿಯರು ನಾಲ್ಕು ಮಕ್ಕಳನ್ನು ಹೇಗೋ ಸಾಕಿ ಬಿಡುತ್ತಾರೆ. ಆದರೆ ನಾಲ್ಕು ಮಕ್ಕಳು ಸೇರಿ ತಂದೆ-ತಾಯಿಯರನ್ನು ಸಾಕಲಾರದೇ ಬೀದಿಗೆ ಬಿಡುವ ಹಲವು ಉದಾಹರಣೆಗಳಿವೆ. ತಮ್ಮ ಇಡೀ ಜೀವನವನ್ನು ಮಕ್ಕಳ ಒಳಿತಿಗಾಗಿ ಮೀಸಲಿಡುವ ತಂದೆ-ತಾಯಿಯರ ಸಮರ್ಪಣಾ ಭಾವವನ್ನು ಅರ್ಥ ಮಾಡಿಕೊಳ್ಳದ ಮಕ್ಕಳು ವಯಸ್ಸಾದವರನ್ನು ದೂರ ಮಾಡಿದರೆ ಅವರ ಸ್ಥಿತಿಯೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳದ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದರಿಂದ ವೃದ್ಧಾಶ್ರಮಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. ಆದುದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೆಸ್ಸೇಜ್‌ಗಳನ್ನು ಕಳುಹಿಸಿ, ವೇದಿಕೆಯ ಮೇಲೆ ಭಾಷಣ ಮಾಡಿ ಒಳ್ಳೆಯತನ ತೋರಿಸಿಕೊಳ್ಳುವ ಬದಲು ನಿಜವಾಗಿ ಅವಶ್ಯಕತೆ ಇರುವವರಿಗೆ ಸಹಾಯ ಹಸ್ತ ಚಾಚೋಣ. ನಮ್ಮ ಗುರುಪೀಠಕ್ಕೆ ಅನೇಕ ವೃದ್ಧರು ಬಂದು ತಮ್ಮ ಮಕ್ಕಳು, ಸೊಸೆಯಂದಿರು ನೀಡುವ ತೊಂದರೆಯನ್ನು ವಿವರಿಸಿ ಕಣ್ಣೀರು ಸುರಿಸುತ್ತಾರೆ.
ಇಂದು ಅವರಿಗೆ ವಯಸ್ಸಾಗಿದೆ ಮುಂದೊಂದು ಕಾಲದಲ್ಲಿ ನಿಮಗೂ ವಯಸ್ಸಾದ ಮೇಲೆ ನಿಮ್ಮ ಮಕ್ಕಳು ಹೀಗೆ ನಡೆಸಿಕೊಂಡರೆ ಹೇಗೆ ಎನ್ನುವುದನ್ನು ನೆನೆದು ಪ್ರಜ್ಞೆಯಿಂದ ಬದುಕಬೇಕು. ಸಾಮಾಜಿಕವಾಗಿ ಗುರುತಿಸಿಕೊಂಡವರು ಅತ್ಯುನ್ನತ ಹುದ್ದೆ ಹೊಂದಿರುವವರು ಸಮಾಜದಲ್ಲಿ ಸಾಕಷ್ಟು ಕೀರ್ತಿ ಧನ ಗಳಿಸಿರುವವರು ಕೂಡ ತಮ್ಮ ಪೋಷಕರನ್ನು ಕಡೆಗಣಿಸುವ ಉದಾರಣೆಗಳಿವೆ. ಹೀಗಾಗಿ ಹಳ್ಳಿಗಳು ವೃದ್ಧರಿಂದ ತುಂಬಿವೆ, ಯುವಕರು ನಗರಗಳಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಬದುಕಿಗಾಗಿ ಇದೆಲ್ಲ ಅನಿವಾರ್ಯವೇ ಸರಿ. ಆದರೂ ಹಿರಿಯ ಜೀವಗಳನ್ನು ಪ್ರೀತಿಸಿ ಗೌರವಿಸುವ ಕೆಲಸ ಮಾಡೋಣ.