ಹುಬ್ಬಳ್ಳಿ: ಜನ ಕಾಂಗ್ರೆಸ್‌ನ್ನು ಬ್ಯಾನ್ ಮಾಡಿದ್ದಾರೆ. ಡಿ.ಕೆ. ಶಿವಕುಮಾರ ಸೇರಿದಂತೆ ಇನ್ನೀತರ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಕುರಿತು ಮಾತನಾಡುವುದೇ ಒಂದು ವಿಚಿತ್ರ ಸಂಗತಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಿಂದ ಬಿಜೆಪಿ ಬ್ಯಾನ್ ಮಾಡಬೇಕು ಎಂಬ ಡಿ.ಕೆ. ಶಿವಕುಮಾರ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಕಾಲದಿಂದಲೇ ಭ್ರಷ್ಟಾಚಾರ ಶುರುವಾಗಿದೆ. ನೆಹರು ಅವರ ಕಾಲದಲ್ಲಿ ಜೀಪ್ ಹಗರಣದಿಂದ ಭ್ರಷ್ಟಾಚಾರ ಶುರುವಾಯಿತು. ಮನಮೋಹನ್ ಸಿಂಗ್ ಕಾಲದಲ್ಲಿ ಸೇರಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಆಗಿದೆ. ಅಟಲ್ ಬಿಹಾರಿ ವಾಜಪೇಯಿ, ಮೂರಾರ್ಜಿ ದೇಸಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ ಒಂದು ಹಗರಣ ನಡೆದಿಲ್ಲ. ಭ್ರಷ್ಟಾಚಾರ ರಹಿತ ಆಡಳಿತವನ್ನು ನಾವು ಕೊಟ್ಟಿದ್ದೇವೆ ಎಂದರು.
ಭ್ರಷ್ಟಾಚಾರದ ಬೀಜ ಬಿತ್ತಿ, ಭ್ರಷ್ಟಾಚಾರದ ತತ್ತಿ ಇಟ್ಟು ಕಾವು ಕೊಟ್ಟವರು ಈಗ ಮಾತನಾಡುತ್ತಿರುವುದು ಆಶ್ಚರ್ಯವಾಗಿದೆ. ಡಿ.ಕೆ. ಶಿವಕುಮಾರ ಅವರು ರಾಜಕಾರಣಕ್ಕೆ ಬರುವ ಮೊದಲ ಅವರ ಆಸ್ತಿ ಏನಿತ್ತು, ಈಗ ಏನಿದೆ ಎಂಬುದನ್ನು ಘೋಷಣೆ ಮಾಡಲಿ. ಇವರ ನಾಟಕ ಕಂಪನಿಯನ್ನು ಜನ ನೋಡಿದ್ದಾರೆ ಎಂದರು.
ಅಮಿತ್ ಶಾ ಹಾಗೂ ಮೋದಿ ಅವರು ನೂರು ಬಾರಿ ರಾಜ್ಯಕ್ಕೆ ಬಂದರೂ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿಯೂ ಸಿದ್ದರಾಮಯ್ಯ ಅವರು ಇದನ್ನೆ ಹೇಳಿದ್ದರು. ಮೋದಿ ಅವರನ್ನು ಕೆಟ್ಟ ಶಬ್ದಗಳಿಂದ ನಿಂದಿಸಿದ್ದರು. 2014 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಏನಾಯ್ತು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಸಮ್ಮೀಶ್ರ ಸರಕಾರದಲ್ಲಿ ಜೊತೆ ಜೊತೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಏನಾಯ್ತು 26 ಸ್ಥಾನಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿತು. ಕುಂದಗೋಳ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಅಲ್ಲ, ನಾವು ತೀರ ಕಡಿಮೆ ಮತಗಳಿಂದ ಸೋತಿದ್ದೇವೆ. ಈ ಬಾರಿ ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದರು.
ರಮೇಶ ಜಾರಕಿಹೊಳಿ ಸೇರಿ ಮೂವರ ಮೇಲೆ ಕಾಂಗ್ರೆಸ್‌ನವರು ದೂರು ನೀಡಿರುವುದರಲ್ಲಿ ಅರ್ಥವಿಲ್ಲ. ಪ್ರಚಾರದಲ್ಲಿರಬೇಕು ಎಂದು ಈ ರೀತಿಯಾಗಿ ಮಾಡುತ್ತಿದ್ದಾರೆ. ಅಲ್ಲದೆ, ಯಾರು ಏನು ಮಾತನಾಡಿದ್ದಾರೆ ಎಂಬುದನ್ನು ನಾನು ನೋಡಿಲ್ಲ. ಎಲ್ಲಿಯೂ ಕೇಸ್ ನಿಲ್ಲುವುದಿಲ್ಲ ಎಂದರು.