ಮಂಗಳೂರು: ರಾಜ್ಯ ಸರ್ಕಾರ ೨೦೨೨-೨೩ನೇ ಸಾಲಿನಲ್ಲಿ ೩೩ ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ೨೪,೦೦೦ ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ ಹೊಂದಿದ್ದು, ಜನವರಿ ಅಂತ್ಯದ ವೇಳೆಗೆ ೨೨ ಲಕ್ಷ ರೈತರಿಗೆ ೧೬,೫೦೦ ಕೋಟಿ ರೂ. ಸಾಲ ವಿತರಿಸಲಾಗಿದೆ. ಮಾರ್ಚ್ ಅಂತ್ಯದೊಳಗೆ ಎಲ್ಲ ಅರ್ಹ ರೈತರಿಗೆ ಸಾಲ ವಿತರಿಸಿ ನಿಗದಿತ ಗುರಿ ಸಾಧಿಸಲಾಗುವುದೆಂದು ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳಿಗೆ ಗುರಿ ನಿಗದಿ ಪಡಿಸಲಾಗಿದ್ದು, ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಡಿಸಿಸಿ ಬ್ಯಾಂಕ್‌ಗಳಿಗೆ ಸ್ವತಃ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುತ್ತೆನೆ. ಸರ್ಕಾರ ನಿಗದಿ ಪಡಿಸಿರುವ ಸಾಲದ ಗುರಿ ತಲುಪಬೇಕು. ಸಾಲ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು. ಅರ್ಹ ರೈತರಿಗೆಲ್ಲರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅತ್ಯುತ್ತಮ ಸಾಧನೆ:
ಎಸ್‌ಸಿಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ ೧.೭೪ ಲಕ್ಷ ರೈತರಿಗೆ ೨೩೦೦ ಕೋಟಿ ರೂ. ಸಾಲ ವಿತರಿಸುವ ಗುರಿ ನೀಡಲಾಗಿದ್ದು, ಈಗಾಗಲೇ ೨೦೨೪ ಕೋಟಿ ರೂ. ಸಾಲ ವಿತರಣೆಯಾಗಿದೆ. ಮಾರ್ಚ್ ಅಂತ್ಯಕ್ಕೆ ಗುರಿ ಸಾಧನೆ ಮಾಡಲಾಗುವುದೆಂದು ಬ್ಯಾಂಕಿನ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ, ಪಶುಸಂಗೋಪನೆ, ಮೀನುಗಾರಿಕೆ, ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಸಹಿತ ವಿವಿಧ ಉzಶಗೆ ಸಾಲ ವಿತರಿಸಲಾಗಿದೆ. ಕೃಷಿ ಸಾಲ ಶೇ.೧೦೦ ವಸೂಲಿಯಾಗಿದೆ. ಇತರ ಉzಶದ ಸಾಲ ಕೂಡಾ ಶೇ.೯೨ರಷ್ಟು ವಸೂಲಿಯಾಗಿದೆ. ರೈತರಿಂದ ಯಾವುದೇ ದೂರುಗಳಿಗೆ ಆಸ್ಪದ ನೀಡದೆ ಎಸ್‌ಸಿಡಿಸಿಸಿ ಬ್ಯಾಂಕ್ ವ್ಯವಸ್ಥಿತವಾಗಿ ಸಾಲ ವಿತರಿಸಿದ್ದು ಅತ್ಯುತ್ತಮ ಸಾಧನೆ ಮಾಡಿದೆ ಎಂದು ಸಚಿವರು ಶ್ಲಾಘಿಸಿದರು.
ಸಂಪೂರ್ಣ ಗಣಕೀರಣ:
ರಾಜ್ಯದ ೬ ಸಾವಿರಕ್ಕೂ ಅಧಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ಗಳಿಗೆ ೧೯೧ ಕೋಟಿ ರೂ. ವೆಚ್ಚದಲ್ಲಿ ಏಕರೂಪದ ತಂತ್ರಾಂಶ ಅಳವಡಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಶೇ.೬೦, ರಾಜ್ಯ ಸರ್ಕಾರ ಶೇ.೨೦ ಹಾಗೂ ಡಿಸಿಸಿ ಬ್ಯಾಂಕ್ ಶೇ.೨೦ ಮೊತ್ತ ಭರಿಸಲಿದೆ. ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬದವರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು ’ಯಶಸ್ವಿನಿ’ ಆರೋಗ್ಯ ಯೋಜನೆ ಜಾರಿಯಾಗಿದ್ದು, ಫೆಬ್ರವರಿ ಅಂತ್ಯದವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಹಣ ಬಿಡುಗಡೆಗೆ ಮನವಿ:
ರೈತರ ಸಾಲಮನ್ನಾ ಸಂಬಂಧಿಸಿ ಸರ್ಕಾರದಿಂದ ಸಹಕಾರಿ ಬ್ಯಾಂಕ್‌ಗಳಿಗೆ ೧೫೭ ಕೋಟಿ ರೂ. ಪಾವತಿಗೆ ಬಾಕಿ ಇದೆ. ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿದ್ದು ಶೀಘ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಸಹಕಾರಿ ಸಂಘಗಳ ಬಲವರ್ಧನೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು ಇಡೀ ದೇಶದಲ್ಲಿ ಮಾದರಿ ಬೈಲಾ ಅಳವಡಿಸಲು ಸೂಚಿಸಿದೆ. ಬೈಲಾದ ಅಂಶಗಳು ಇಂಗ್ಲೀಷ್‌ನಲ್ಲಿದ್ದು ಕನ್ನಡಕ್ಕೆ ಭಾಷಾಂತಾರ ಮಾಡಲಾಗಿದೆ. ಮಾದರಿ ಬೈಲಾ ಶೀಘ್ರ ಅಳವಡಿಕೆಯಾಗಲಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭ ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಬ್ಯಾಂಕಿನ ಅಧ್ಯಕ್ಷ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸನ್ಮಾನಿಸಿದರು.
ಶಾಸಕ ಡಿ.ವೇದವ್ಯಾಸ ಕಾಮತ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ದೇವಿ ಪ್ರಸಾದ್ ಶೆಟ್ಟಿ ಬೆಳಪು, ಎಂ. ವಾದಿರಾಜ ಶೆಟ್ಟಿ, ಜೈರಾಜ್ ಬಿ. ರೈ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಕೆ. ಜೈರಾಜ್ ಬಿ. ರೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸಹಕಾರ ಸಂಘಗಳ ಜಂಟಿ ನಿಬಂಧಕ ಡಾ. ಜಿ. ಉಮೇಶ್, ಸಹಾಯಕ ನಿಬಂಧಕ ಸುಧೀರ್ ಕುಮಾರ್ ಉಪಸ್ಥಿತರಿದ್ದರು.