ಜನರಿಗೆ ತೊಂದರೆಯಾಗದಂತೆ ಕೊರೊನಾ ಮುಂಜಾಗ್ರತಾ ಕ್ರಮ: ಸಿಎಂ ಬೊಮ್ಮಾಯಿ

Advertisement

ಬೆಳಗಾವಿ: ಜನರ ಆರ್ಥಿಕತೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವಾಗದಂತೆ ಕೊರೊನಾ ಮುನ್ನೆಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಬೆಳಗಾವಿ ಸುವರ್ಣಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್‌ ನಿಯಂತ್ರಣದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಹಂತಹಂತವಾಗಿ ನಿಯಮಗಳನ್ನು ಜಾರಿ ತರಲಾಗುವುದು ಎಂದರು.
ಹೊಸ ವರ್ಷಕ್ಕೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸುವ ಬಗ್ಗೆ ಉತ್ತರಿಸಿ, ಪ್ರತಿ ಬಾರಿಯಂತೆ ಈ ವರ್ಷವೂ ನಿಯಮಗಳಿದ್ದು, ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಸೇರಿಸಲಾಗುವುದು. ಜನಸಾಮಾನ್ಯರ ದೈನಂದಿನ ಚಟುವಟಿಕೆ, ಆರ್ಥಿಕತೆಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಹಂತಹಂತವಾಗಿ ಜಾರಿ ಮಾಡಲಾಗುವುದು ಎಂದರು.
ಬೆಳಗಾವಿ ಅಧಿವೇಶನ ಫಲಪ್ರದವಾಗಬೇಕು:
ಬೆಳಗಾವಿಯಲ್ಲಿನ ಅಧಿವೇಶನ ಫಲಪ್ರದ ಹಾಗೂ ಅರ್ಥಪೂರ್ಣವಾಗಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಉತ್ತರ ಕರ್ನಾಟಕದ ಸಮಸ್ಯೆಗಳು ಮತ್ತು ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆಯಾಗಬೇಕು. ವಿರೋಧಪಕ್ಷಗಳು ಹತ್ತು ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಿವೆ. ಯಾವ ವಿಚಾರವೇ ಆಗಲಿ ಚರ್ಚಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.
ಇಂದು ನವದೆಹಲಿಗೆ ಪ್ರಯಾಣ- ಪಕ್ಷದ ವರಿಷ್ಠರೊಂದಿಗೆ ಚರ್ಚೆ:
ಇಂದು ನವದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ಕಳೆದ ಬಾರಿ ಕೆಲವೊಂದು ವಿಷಯಗಳ ಚರ್ಚೆ ಅಪೂರ್ಣವಾಗಿದ್ದರಿಂದ ಪುನಃ ಕರೆದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಸಭೆಯನ್ನು ಕರೆದಿದ್ದಾರೆ. ಪಕ್ಷದ ಮುಖಂಡರು, ಕೇಂದ್ರ ಗೃಹ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದು, ಚುನಾವಣಾ ತಯಾರಿ, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲ ವಿಚಾರಗಳನ್ನು ಚರ್ಚಿಸಲಾಗುವುದು. ಈ ಸಭೆಯಲ್ಲಿ ಭಾಗವಹಿಸಿ ನಾಳಿನ ಅಧಿವೇಶನಕ್ಕೆ ವಾಪಸ್ಸು ಬರಲಿದ್ದೇನೆ. ಸಚಿವ ಸಂಪುಟ ವಿಸ್ತರಣೆ, ಖಾಲಿ ಸಚಿವ ಸ್ಥಾನ ಭರ್ತಿ ವಿಚಾರಗಳು ಸಭೆಯಲ್ಲಿ ಚರ್ಚೆಯಾಗಲಿವೆ ಎಂದರು.
ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ:
ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು. ಕೇಂದ್ರ ನೀರಾವರಿ ಸಚಿವರ ಭೇಟಿಗೆ ಸಮಯ ಕೇಳಲಾಗಿದ್ದು, ನೀರಾವರಿಯ ನಾಲ್ಕೈದು ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.