ಜನಪ್ರತಿನಿಧಿಗಳಿಗೆ ಸಚಿವ ಆನಂದಸಿಂಗ್ ದೀಪಾವಳಿ ಗಿಫ್ಟ್!

GIFT
Advertisement

ಹೊಸಪೇಟೆ: 2023ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ಜನ ಸಂಕಲ್ಪ ಯಾತ್ರೆ ಮೂಲಕ ಪ್ರಚಾರ ಕಣವನ್ನು ಸಿದ್ಧಗೊಳಿಸಿರುವ ಸಚಿವ ಆನಂದ ಸಿಂಗ್ ಅವರು ಕ್ಷೇತ್ರದ ಜನರು ಮತಗಳನ್ನು ಸೆಳೆಯಲು ಜನಪ್ರತಿನಿಧಿಗಳಿಗೆ ಗಾಳ ಹಾಕಿದ್ದಾರೆ. ದೀಪಾವಳಿ ಹಬ್ಬದ ನೆಪದಲ್ಲಿ ಭರ್ಜರಿ ಗಿಫ್ಟ್ ನೀಡುವ ಮೂಲಕ ತನ್ನತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.
ವಿಜಯನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಹೊಸಪೇಟೆ ನಗರಸಭೆಯಲ್ಲಿ 5 ನಾಮನಿರ್ದೇಶಿತ ಸೇರಿದಂತೆ 40 ಸದಸ್ಯರು, ಕಮಲಾಪುರ ಪಟ್ಟಣ ಪಂಚಾಯಿತಿಯ 3 ನಾಮನಿರ್ದೇಶಿತ ಸೇರಿದಂತೆ 20 ಸದಸ್ಯರು ಹಾಗೂ 10 ಗ್ರಾಪಂಗಳ 182 ಸದಸ್ಯರಿದ್ದು, ಬಹುತೇಕ ಸದಸ್ಯರಿಗೆ ದೀಪಾವಳಿ ಉಡುಗೊರೆ ನೀಡಿದ್ದಾರೆ. ನಗರಸಭೆ ಸದಸ್ಯರಿಗೆ ತಲಾ 1 ಲಕ್ಷ ರೂ., 1 ಕೆಜಿ ಶುದ್ಧ ಬೆಳ್ಳಿ ಗಟ್ಟಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನಹಾರ ಹಾಗೂ ಡ್ರೈಫ್ರುಟ್ಸ್ ಬಾಕ್ಸ್‌ಗಳನ್ನು ಒಳಗೊಂಡಿರುವ ಕಿಟ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಗ್ರಾಪಂ ಸದಸ್ಯರಿಗೆ ತಲಾ 27 ಸಾವಿರ ರೂ., 500 ಗ್ರಾಂ ಶುದ್ಧ ಬೆಳ್ಳಿ ಗಟ್ಟಿ, ದೀಪಾವಳಿ ಹಬ್ಬದಂದು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಲಕ್ಷ್ಮೀ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಜೊತೆಗೆ ಸಚಿವರ ಬೆಂಬಲಿಗರು ಜನಪ್ರತಿನಿಧಿಗಳಿಗೆ ತಲುಪಿಸಿದ್ದಾರೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.