ಶೆಟ್ಟರಗಾಗಿ ರಾಜೀನಾಮೆಗೆ ಸಿದ್ಧರಾದ ಪಾಲಿಕೆ ಸದಸ್ಯರು

ಶೆಟ್ಟರ್‌
Advertisement

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಬರೊಬ್ಬರಿ 16 ಪಾಲಿಕೆ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲೂ ಜಗದೀಶ ಶೆಟ್ಟರ ಹೆಸರಿರಲಿಲ್ಲ. ಎರಡನೇ ಪಟ್ಟಿಯಲ್ಲಾದ್ರು ಇರುತ್ತಾ ಅಂತ ಕಾದವರಿಗೆ ನಿರಾಸೆ ಆಗಿತ್ತು. ಈ ಬಗ್ಗೆ ಸ್ವತಃ ಜಗದೀಶ ಶೆಟ್ಟರ ದೆಹಲಿಗೆ ತೆರಳಿ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಬಂದಿದ್ದರು. ಆದರೂ ಸಮಾಧಾನಕರ ಭರವಸೆ ಸಿಗದ ಹಿನ್ನೆಲೆಯಲ್ಲಿ ಬಿಜೆಪಿಗೆ ಚುರುಕು ಮುಟ್ಟಿಸಲು ಹು-ಧಾ ಮಹಾನಗರ ಪಾಲಿಕೆಯ 16 ಸದಸ್ಯರು ರಾಜೀನಾಮೆ ನೀಡಲಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ತಪ್ಪೋ ಆತಂಕ ಹಿನ್ನಲೆಯಲ್ಲಿ 16 ಪಾಲಿಕೆ ಸದಸ್ಯರಲ್ಲದೇ ಬಿಜೆಪಿಯ ವಿವಿಧ ಘಟಕದ 26 ಪದಾಧಿಕಾರಿಗಳೂ ರಾಜೀನಾಮೆ ನೀಡುತ್ತೇವೆ ಎಂದು ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲು ಅವರಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ, ರಾಜಣ್ಣ ಕೊರವಿ, ಉಮೇಶ್ ಗೌಡ ಕೌಜಗೇರಿ, ತಿಪ್ಪಣ್ಣ ಮಜ್ಜಗಿ, ಸಿಮಾ ಮೊಗಲಿಶೆಟ್ಟರ್, ಸಂತೋಷ ಚವ್ಹಾನ್, ಮಹದೇವಪ್ಪ ನರಗುಂದ, ಬೀರಪ್ಪ ಕಂಡೇಕರ, ಉಮಾ ಮುಕುಂದ, ವೀರಣ್ಣ ಸವಡಿ, ರೂಪಾ ಶೆಟ್ಟಿ, ಕಿಶನ್ ಬೆಳಗಾವಿ, ಸರಸ್ವತಿ ದೊಂಗಡಿ, ಚಂದ್ರಿಕಾ ಮಿಸ್ತ್ರೀ, ಮೀನಾಕ್ಷಿ ಒಂಟಮುರಿ ಸೇರಿ 16 ಜನ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಸಹಿ ಹಾಕಿದ್ದಾರೆ.