ಬಾಗಲಕೋಟೆ: ಜಮಖಂಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಹುನ್ನೂರ ಚೆಕ್ಪೋಸ್ಟ್ನಲ್ಲಿ ಸಂಶಯಾಸ್ಪದವಾದ ಹಾಗೂ ದಾಖಲೆ ಇಲ್ಲದ ಒಟ್ಟು 2.10 ಕೋಟಿ ರೂ.ಗಳ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್ಕುಮಾರ ತಿಳಿಸಿದ್ದಾರೆ.
ಜಮಖಂಡಿಯ ಹುಣ್ಣೂರು ಚೆಕ್ಪೋಸ್ಟ್ನಲ್ಲಿ ಕಾರ್ಯನಿರತ ಸ್ಟಾಟಿಸ್ಟಿಕಲ್ ಸರ್ವೆನೆಸ್ಟ್ ತಂಡದ ಸದಸ್ಯರು ತಪಾಸಣೆ ನಡೆಸುತ್ತಿರುವ ವೇಳೆಯಲ್ಲಿ ಅನುಮಾನಾಸ್ಪದ ಒಂದು ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ದಾಖಲೆ ಇಲ್ಲದ ಅಂದಾಜು 2.10 ಕೋಟಿ ರೂ.ಗಳ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.
ಸೌಹಾರ್ದ ಬ್ಯಾಂಕಿಗೆ ಸಂಬಂಧಿಸಿದವರಾಗಿ ತಿಳಿಸಿದ್ದು, ಒದಗಿಸಿರುವ ದಾಖಲಾತಿಗಳು ಪರಿಪೂರ್ಣವೆಂದು ಪರಿಗಣಿಸಲು ಸಾಧ್ಯವಾಗದೆ ಇದ್ದ ಹಿನ್ನೆಲೆಯಲ್ಲಿ ಅವರಿಗೆ ದಾಖಲೆ ಒದಗಿಸಲು ಹೆಚ್ಚಿನ ಅವಕಾಶವನ್ನು ನೀಡಿ, ಸದರಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಚುನಾವಣಾಧಿಕಾರಿಗಳ ಕಚೇರಿಯಿಂದ ಜಮಖಂಡಿಯ ಸರ್ಕಾರಿ ಖಜಾನೆಗೆ ಜಮಾ ಮಾಡಲಾಗಿದೆ. ಪಂಚನಾಮೆ ಸಹಿತ ಜಿಲ್ಲಾಮಟ್ಟದ ಹಣ ಮುಟ್ಟುಗೋಲು ಪರಿಹಾರ ಸಮಿತಿಗೆ ವರದಿ ಸಲ್ಲಿಸಲಾಗಿದ್ದು, ಸದರಿ ಸಮಿತಿಯು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ.