ಹುಬ್ಬಳ್ಳಿ: ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆ ಮಾದರಿಯಲ್ಲಿ ಮತದಾರರ ಮಾಹಿತಿ ಕಲೆ ಹಾಕುತ್ತಿದ್ದ ಮೂವರನ್ನು ಕಾಂಗ್ರೆಸ್ ಕಾರ್ಯಕರ್ತರು ಸೆರೆ ಹಿಡಿದು ಹಳೇ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.
ದೆಹಲಿ ಮೂಲದ ಎಎಸ್‌ಆರ್ ರಿಸರ್ಚ್ ಆ್ಯಂಡ್ ಕನ್ಸಲ್ಟಿಂಗ್ ಸರ್ವಿಸ್ ಪ್ರೈ.ಲಿ. ಸದಸ್ಯರು ವಾರ್ಡ್ ನಂ.೫೩ರ ವ್ಯಾಪ್ತಿಯ ನವಅಯೋಧ್ಯಾ ನಗರದಲ್ಲಿ ಕಳೆದ ಮೂರು ದಿನಗಳಿಂದ ಒಂದು ತಂಡ ಮನೆ ಮನೆಗೆ ತೆರಳಿ ನಿಮ್ಮ ಮನೆಯ ಯಜಮಾನ ಯಾರು? ನಿಮ್ಮ ಮನೆಯಲ್ಲಿ ಎಷ್ಟು ಜನ ಮತದಾರರಿದ್ದಾರೆ? ನಿಮ್ಮ ಜಾತಿ ಯಾವುದು ಎಂಬ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು. ಇದನ್ನು ಕಂಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ಹಾಗೂ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಹಾಗೂ ಕಾರ್ಯಕರ್ತರು ಮೂವರನ್ನು ವಿಚಾರಿಸಿದಾಗ ಗೋ ಸರ್ವೇ ಆ್ಯಪ್ ಮೂಲಕ ಮತದಾರರ ಮಾಹಿತಿ ಕಲೆ ಹಾಕುತ್ತಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ಕಾಂಗ್ರೆಸ್ ಕಾರ್ಯಕರ್ತರು ಹರೀಶ, ನಿತೇಶ, ಮಂಜುನಾಥ ಎಂಬುವವರನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಸಮೀಕ್ಷೆಗೂ ಮುನ್ನ ಪ್ರಿಪೋಲ್ ಸರ್ವೇ ಮಾಡುವುದಾಗಿ ಹು-ಧಾ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿರುವ ಕೆಲ ದಾಖಲೆಗಳನ್ನು ಮೂವರು ಪೊಲೀಸರಿಗೆ ನೀಡಿದ್ದಾರೆ.