ಇಳಕಲ್: ಚಿತ್ತ ಮಳೆ ಅರ್ಭಟಕ್ಕೆ ಸೋಮವಾರ ನಗರದ ಜನತೆ ಅಕ್ಷರಶಃ ನಲುಗಿ ಹೋಗಿದೆ ಬೆಳಿಗ್ಗೆ ಮೂರು ಗಂಟೆಗೆ ಆರಂಭವಾದ ಮಳೆ ಸಂಜೆಯಾದರೂ ಬಿಟ್ಟು ಬಿಡದೇ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಧ್ಯಾಹ್ನ ಎರಡು ಗಂಟೆಗೆ ಸುರಿದ ಮಳೆಯಿಂದಾಗಿ ಹಾದಿ ಬಸವಣ್ಣ ನಗರದ ಐದು ನೂರು ಮನೆಗಳ ಬಡಾವಣೆಯ ಬಹಳಷ್ಟು ಮನೆಗಳಲ್ಲಿ ನೀರು ಹೊಕ್ಕು ನೇಕಾರರ ಪರಿಸ್ಥಿತಿ ಹದಗೆಡುವಂತೆ ಮಾಡಿತು. ಮಹಿಳೆಯರು ಬಾಯಿ ಬಡೆದುಕೊಳ್ಳುತ್ತಾ ತಮ್ಮ ಸ್ಥಿತಿಯನ್ನು ಕಣ್ಣೀರಿನ ಜೊತೆಗೆ ತೋಡಿಕೊಂಡರು. ಇಳಕಲ್ ತೊಂಡಿಹಾಳ ಗ್ರಾಮದ ರಸ್ತೆಯಲ್ಲಿ ಬರುವ ಹಿರೇಹಳ್ಳದ ಸೇತುವೆ ಭಾಗಶಃ ಕೊಚ್ಚಿ ಹೋಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಿತ್ತ ಮಳೆ ತನ್ನ ಚಿತ್ತ ಬಂದ ಹಾಗೆ ಸುರಿಯುತ್ತೆ ಎಂಬ ಮಾತಿನಂತೆ ಆರಂಭವಾದ ಮೊದಲ ದಿನವೇ ತನ್ನ ಉಗ್ರ ರೂಪ ತೋರಿಸಿದೆ.