ಚಿತಾಭಸ್ಮದ ದರ್ಶನಕ್ಕೆ ಭಕ್ತರ ಮಹಾಪೂರ

ಭಕ್ತರ ದಂಡು
Advertisement

ಸಹಸ್ರಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ ನಿಸರ್ಗದ ಮಡಿಲಿಗೆ ಸೇರಿದ್ದಾರೆ. ಆದರೆ, ಅವರ ಭಕ್ತವರ್ಗದ ಕಂಬನಿ ಮಾತ್ರ ಇನ್ನೂ ನಿಂತಿಲ್ಲ. ಜ್ಞಾನಯೋಗಾಶ್ರಮದಲ್ಲಿರುವ ಸಿದ್ದೇಶ್ವರ ಸ್ವಾಮೀಜಿ ಪವಿತ್ರ ಚಿತಾಭಸ್ಮದ ದರ್ಶನವನ್ನು ಪಡೆಯಲು ಸಹಸ್ರ ಸಂಖ್ಯೆಯಲ್ಲಿ ಭಕ್ತರ ಮಹಾಪೂರ ಹರಿದು ಬರುತ್ತಿದೆ. ಜನದಟ್ಟಣೆಯಿಂದಾಗಿ ಶ್ರೀಗಳ ಪಾರ್ಥೀವ ಶರೀರದ ದರ್ಶನ ಪಡೆಯಲು ಸಾಧ್ಯವಾಗದೇ ಇರುವವರು ಶ್ರೀಗಳ ಚಿತಾಭಸ್ಮವನ್ನು ದರ್ಶನ ಮಾಡೋಣ ಎಂಬ ಶ್ರದ್ಧೆಯೊಂದಿಗೆ ಆಶ್ರಮಕ್ಕೆ ಹೆಜ್ಜೆ ಹಾಕುತ್ತಿದ್ದಾರೆ.
ಸರತಿ ಸಾಲಿನಲ್ಲಿ ನಿಂತು ಶ್ರೀಗಳ ಚಿತಾಭಸ್ಮವನ್ನು ಭಕ್ತಿಯಿಂದ ನಮಿಸಿ, ಮುಂಭಾಗದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಹಣೆಮಣೆದು ನಮಿಸಿ ಮುಂದೆ ಸಾಗುತ್ತಿದ್ದಾರೆ. ನಸುಕಿನ ಜಾವವೇ ಭಕ್ತಾದಿಗಳ ದಂಡು ಸೇರಲು ಆರಂಭವಾಗಿದೆ. ಈ ಸಮಯದಲ್ಲಿಯೂ ಜನಸಂದಣಿಯಾಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಅಲ್ಲಿಯೂ ನಿನ್ನೆಯ ಅಂತಿಮ ದರ್ಶನ ಸಂದರ್ಭದಲ್ಲಿ ಮಾಡಲಾದ ವ್ಯವಸ್ಥೆ ಮಾಡಲಾಗಿದೆ. ಸಿಂಗಲ್ ಬ್ಯಾರಿಕೇಡ್ ಮಾರ್ಗ ರೂಪಿಸಿ ಅಲ್ಲಿ ಭಕ್ತರು ಸಾಗಿ ದರ್ಶನ ಪಡೆದು ವಾಪಾಸ್ಸಾಗುವ ವ್ಯವಸ್ಥೆ ಮಾಡಲಾಗಿದೆ.