ಹುಬ್ಬಳ್ಳಿ: ಬಿಆರ್‌ಟಿಎಸ್‌ನ `ಚಿಗರಿ’ ಬಸ್ ಸಂಚಾರ ಶನಿವಾರ ಪ್ರಯಾಣಿಕರನ್ನು ಹೈರಾಣಾಗಿಸಿತು. ಚಿಗರಿ ಬಸ್‌ನ್ನೇ ಹತ್ತಿ ಪ್ರಯಾಣಿಸಿ ಬೇಗ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಬೇಕು ಎಂದು ಮಾರುಕಟ್ಟೆಗೆ ಹಾಗೂ ಇತರ ಕೆಲಸ ಕಾರ್ಯಗಳಿಗೆ ಹೋದವರು ಪರದಾಡಿದರು.
ನೋಡು ನೋಡುತ್ತಿದ್ದಂತೆಯೇ ಬಂದು ನಿಲ್ಲುತ್ತಿದ್ದ ಚಿಗರಿಗಳು ಅದೇಕೋ ಶನಿವಾರ ಅರ್ಧ ತಾಸು, ಮುಕ್ಕಾಲು ತಾಸು ಕಾದರೂ ಸುಳಿಯಲಿಲ್ಲ. ಬಿಆರ್‌ಟಿಎಸ್ ಬಸ್ ಸ್ಟಾಪ್‌ಗಳಲ್ಲಿ ೨ ಇದ್ದ ಪ್ರಯಾಣಿಕರು, ನಾಲ್ಕಾಗಿ, ಹತ್ತಾಗಿ ನೂರಾರು ಜನರಾದರು. ಗುಂಪು ಗುಂಪಾಗಿ ನಿಂತುಕೊಂಡು ಬಸ್ಸಿಗಾಗಿ ಕಾದು ನಿಲ್ಲಬೇಕಾಯಿತು. ಕೊನೆಗೆ ಟಿಕೆಟ್ ಕೊಟ್ಟ ಕೌಂಟರ್‌ನಲ್ಲಿದ್ದ ಸಿಬ್ಬಂದಿಯನ್ನು ಪ್ರಯಾಣಿಕರು ವಿಚಾರ ಮಾಡಿದ್ದಾಯಿತು. ಬಸ್ ಮಾತ್ರ ಬೇಗ ಬರಲಿಲ್ಲ ಸಂಜೆ ೮ ಗಂಟೆ ಹೊತ್ತಿಗೆ ಮತ್ತಷ್ಟು ತೊಂದರೆಯನ್ನು ಪ್ರಯಾಣಿಕರು ಅನುಭವಿಸಿದರು.
ಪ್ರಯಾಣಿಕರ ಆಕ್ರೋಶಕ್ಕೆ ಟಿಕೆಟ್ ಕೌಂಟರ್‌ನಲ್ಲಿದ್ದ ಸಿಬ್ಬಂದಿ ಹೇಳಿದ್ದು ಇಷ್ಟು. ಶನಿವಾರ ಸೆಕೆಂಡ್ ಸ್ಯಾಟರ್‌ಡೇ. ಜನ ಕಡಿಮೆ ರ‍್ತಾರೆ ಅಂತಾ ಬಸ್ ಸಂಖ್ಯೆ ಕಡಿಮೆ ಮಾಡಿ ಎಂದು ಯಾರೊ ಮೇಲಿನವರು ಹೇಳಿದ್ದಾರಂತೆ. ಅದಕ್ಕೆ ಅರ್ಧ ಬಸ್ ಮಾತ್ರ ಓಡಿಸ್ತಿದ್ದಾರೆ ಎಂದು ಹೇಳಿದಾಗ ಪ್ರಯಾಣಿಕರು ಆಕ್ರೋಶ ದುಪ್ಪಟ್ಟಾಯಿತು. ಕೌಂಟರ್‌ನಲ್ಲಿದ್ದ ಸಿಬ್ಬಂದಿ ಅಸಹಾಯಕತೆ ಕಂಡು ಸಾವರಿಸಿಕೊಂಡು ನೂಕುನುಗ್ಗಲಿನಲ್ಲಿಯೇ ತಾವು ತೆರಳಬೇಕಾದ ಸ್ಥಳಕ್ಕೆ ತೆರಳಿದರು. ಮತ್ತೊಂದಿಷ್ಟ ಜನರು ನೂಕುನುಗ್ಗಲು ಯಾಕಪ್ಪ ಬೇಕು. ನಮ್ಗೆ ಹಣ ವಾಪಸ್ ಕೊಡ್ರಿ ಬೇಂದ್ರೆ ಬಸ್‌ಗೆ ಹೋಗ್ತಿವಿ, ನಗರ ಸಾರಿಗೆ ಬಸ್‌ಗೆ ಹೋಗ್ತಿವಿ ಎಂದು ಹಣ ವಾಪಸ್ ಪಡೆಯಲು ಮುಂದಾಗಿದ್ದು ಕಂಡು ಬಂದಿತು.
ಬಸ್ ಕಡಿಮೆ ಮಾಡಿಲ್ಲ, ಎಂದಿನಂತೆ ಸಂಚರಿಸಿವೆ: ಬಿಆರ್‌ಟಿಎಸ್
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಒಟ್ಟು ೯೦ ಚಿಗರಿ ಬಸ್‌ಗಳು ಪ್ರತಿ ದಿನ ಸಂಚರಿಸುತ್ತವೆ. ಸೆಕೆಂಡ್ ಸ್ಯಾಟರ್ ಡೇ, ರವಿವಾರ, ಹಬ್ಬದ ರಜೆ ಅಂತಾ ಮಾರ್ಗದಲ್ಲಿ ಓಡಿಸುವ ಬಸ್ ಸಂಖ್ಯೆ ಕಡಿಮೆ ಮಾಡುವುದಿಲ್ಲ. ಯಾಕೆಂದರೆ ಶೆಡ್ಯೂಲ್ ನಿರ್ವಹಣೆ ಮಾಡಲೇಬೇಕು. ಶಿಫ್ಟ್ವೈಸ್ ಕಾರ್ಯಾಚರಣೆ ನಡೆಯುತ್ತಿರುತ್ತದೆ. ಪ್ರಯಾಣಿಕರು ಹೆಚ್ಚಿರಲಿ. ಕಡಿಮೆ ಇರಲಿ. ಇರುವಷ್ಟು ಬಸ್ ರಸ್ತೆಗಿಳಿಸಲೇಬೇಕು. ಹೀಗಾಗಿ, ಶನಿವಾರವೂ ಅಷ್ಟೇ ಇರುವಷ್ಟು ಬಸ್ ಸಂಚರಿಸುವೆ ಎಂದು ಬಿಆರ್‌ಟಿಎಸ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದರು.
ಜಾತ್ರೆ, ರಜೆ ಕಾರಣ, ಮದುವೆ ಮುಂತಾದ ಕಾರಣದಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಮುಖ್ಯವಾಗಿ ಚಿಗರಿಯಲ್ಲಿ ಸಂಚರಿಸಲು ಜನದಟ್ಟಣೆ ಕಂಡು ಬರುತ್ತಿದೆ. ಹೀಗಾಗಿ, ಪ್ರಯಾಣಿಕರ ದಟ್ಟಣೆ ಆಗಿದೆ ಎಂದು ತಿಳಿಸಿದರು.