ಚಿಕ್ಕನಗೌಡರಗೆ ಕಾಂಗ್ರೆಸ್ ಟಿಕೆಟೂ ಅರ್ಧಚಂದ್ರ!

Advertisement

ಹುಬ್ಬಳ್ಳಿ :ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಪಕ್ಷದ ಮುಖಂಡರ ಮನೆ ಬಾಗಿಲು ತಟ್ಟಿದ್ದ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಮುಂದಿನ ನಡೆ ಏನು ಎಂಬ ಕುತೂಹಲ ಕ್ಷೇತ್ರದಲ್ಲಿ ಸೃಷ್ಡಿಯಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಚಿಕ್ಕನಗೌಡರು ಕಾಂಗ್ರೆಸ್ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದರು. ಆದರೆ, ಮುಖಂಡರಿಂದ ಯಾವುದೇ ರೀತಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಬರೀ ಕೈಯಲ್ಲಿ ಚಿಕ್ಕನಗೌಡರ ಕ್ಷೇತ್ರಕ್ಕೆ ಮರಳಿದ್ದಾರೆ.

ಹೀಗಾಗಿ, ಈ ಮಾಜಿ ಶಾಸಕರ ಮುಂದೆ ನಡೆ ಏನು? ಬೆಂಬಲಿಗರ ಅಭಿಪ್ರಾಯ ಪಡೆದು ಪಕ್ಷೇತರರಾಗಿ ಕಣಕ್ಕಿಳಿಯುತ್ತಾರಾ? ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಬಾಹ್ಯವಾಗಿ ಬೆಂಬಲಿಸುತ್ತಾರಾ? ಜೆಡಿಎಸ್ ತೆನೆ ಹೊರುತ್ತಾರಾ? ಎಂಬ ಚರ್ಚೆಗಳು ನಡೆದಿವೆ.
ಆದರೆ, ಮಾಜಿ ಶಾಸಕ ಚಿಕ್ಕನಗೌಡರ ಮಾತ್ರ ತಮ್ಮ ಮುಂದಿನ ರಾಜಕೀಯ ನಡೆ ಏನು? ಎಂಬುದನ್ನು ಬಿಟ್ಟು ಕೊಟ್ಟಿಲ್ಲ.

‘ ನೋಡಿ ನಾನು ಕಾಂಗ್ರೆಸ್ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಕ್ಷೇತ್ರಕ್ಕೆ ಟಿಕೆಟ್ ಬಯಸಿದ್ದೇನೆ. ಮಾತನಾಡಿ ಬಂದಿದ್ದೇನೆ ಅಷ್ಟೇ. ಮುಂದಿನ ತೀರ್ಮಾನ ಆ ಪಕ್ಷದ ನಾಯಕರೇ ಹೇಳಬೇಕು. ಈ ವರೆಗೂ ಏನೂ ಪ್ರತಿಕ್ರಿಯೆ ಬಂದಿಲ್ಲ. ಅವರೂ ಆ ಪಕ್ಷದ ಇತರ ಮುಖಂಡರೊಂದಿಗೆ ಚರ್ಚೆ ಮಾಡಬೇಕಾಗುತ್ತದೆ ಎಂದು ಚಿಕ್ಕನಗೌಡರ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು.

ಬೆಂಬಲಿಗರ ಸಭೆ ಶೀಘ್ರ ಕರೆದು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಂತೂ ‘ನಿಕ್ಕಿ’ ಎಂದು ಚಿಕ್ಕನಗೌಡರ ಹೇಳಿದರು.