ಚಿಂಚನಸೂರ ಪರವಾಗಿ ಪತ್ನಿ ನಾಮಪತ್ರ ಸಲ್ಲಿಕೆ

ಗುರುಮಠಕಲ್‌
Advertisement

ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ ಚಿಂಚನಸೂರ ಅವರು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಪತಿಯ ಪರವಾಗಿ ಅವರ ಧರ್ಮಪತ್ನಿ ಅಮರೇಶ್ವರಿ ಬಾಬುರಾವ್ ಚಿಂಚನಸೂರ ಅವರು ನಾಮಪತ್ರ ಸಲ್ಲಿಸಿದರು.
ಕಳೆದ ಶುಕ್ರವಾರ ರಾತ್ರಿ ಗುರುಮಠಕಲ್‌ದಿಂದ ಕಲಬುರಗಿಗೆ ತೆರಳುವ ಸಂದರ್ಭದಲ್ಲಿ ಕಲಬುರಗಿ ನಗರದಲ್ಲಿ ಬಾಬುರಾವ್ ಚಿಂಚನಸೂರ ಅವರ ಕಾರು ಪಲ್ಟಿಯಾಗಿ ಗಂಭೀರ ಸ್ವರೂಪದ ಗಾಯಗಳಾಗಿವೆ. ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಸೂಚಕರು ನಾಮಪತ್ರ ಸಲ್ಲಿಸಲು ಅವಕಾಶ ಇರುವುದರಿಂದ ಅವರ ಪತ್ನಿಯೇ ಗುರುಮಠಕಲ್‌ಗೆ ಆಗಮಿಸಿ ಪತಿಯ ಪರವಾಗಿ ನಾಮಪತ್ರ ಸಲ್ಲಿಸುವ ಮೂಲಕ ಅವರ ಬೆಂಬಲಿಗರಲ್ಲಿ ತಲೆದೋರಿದ್ದ ಅತಂಕಕ್ಕೆ ತೆರೆ ಎಳೆದರು.
ಅಮರೇಶ್ವರಿ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ, ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಚಪೆಟ್ಲಾ, ಮುಖಂಡರಾದ ಶರಣಪ್ಪ ಮಾನೆಗಾರ, ಸಾಯಿಬಣ್ಣ ಬೋರಬಂಡಾ, ವಕೀಲರಾದ ಜಿ. ಭೀಮರಾವ ಅವರು ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ನಂತರ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪೂರ, ನಮ್ಮ ನಾಯಕರಾಗಿರುವ ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನೇ ದಿನೆ ಅವರು ಚೇತರಿಸಿಕೊಳ್ಳುತ್ತಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ. ವೈದ್ಯರ ಸಲಹೆಯ ಮೇರೆಗೆ ಇನ್ನೂ ಕೆಲ ದಿನ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕಡೆ ದಿನವಾದ ಏ. 20ರಂದು ಗುರುವಾರ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಚಿಂಚನಸೂರ ಅವರೇ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸುತ್ತಾರೆ. ಆಸ್ಪತ್ರೆಯಿಂದಲೇ ಚಿಂಚನಸೂರ ಅವರು ಕಾರ್ಯಕರ್ತರ ಕುರಿತು ಮಾತನಾಡಿರುವ ವಿಡಿಯೋ ಎಲ್‌ಇಡಿ ಸ್ಕ್ರೀನ್‌ಗಳ ಮೂಲಕ ಎಲ್ಲಾ ಗ್ರಾಮಗಳಲ್ಲಿ ಪ್ರದರ್ಶನ ಮಾಡುವ ಜೊತೆಗೆ ಅವರ ಗೆಲ್ಲಿಸುವುದಾಗಿ ಹೇಳಿದರು.