ಹುಬ್ಬಳ್ಳಿ : ನನಗೆ ಈಗಲೂ ಟಿಕೆಟ್ ಸಿಗುವ ವಿಶ್ವಾಸವಿದೆ. ಕೇಂದ್ರ ಸಚಿವ ಜೋಶಿ, ಸಚಿವ ಮುನೇನಕೊಪ್ಪ ಬಂದು ಮಾತನಾಡಿದ್ದಾರೆ. ಪಕ್ಣ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಇನ್ನೂ ಒಂದು ದಿನ ಕಾದು ನೋಡೋಣ ಎಂದು ಹೇಳುವ ಮೂಲಕ ಬಿಜೆಪಿ ಹೈ ಕಮಾಂಡ್ ಗೆ ಮಾಜಿ ಸಿಎಂ ಜಗದೀಶ್. ಶೆಟ್ಟರ್ ಮತ್ತೊಂದು ದಿನ ಗಡುವು ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಕಿಕ್ಕಿರಿದು ಸೇರಿದ ಅಭಿಮಾನಿಗಳು, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.ಈ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ. ನಾಮಪತ್ರ ಸಲ್ಲಿಕೆಗೆ ಸಮಯ ಅವಕಾಶವಿದೆ. ಹೈ ಕಮಾಂಡ್ ನಿಲುವು ಏನು ಎಂಬುದು ಗೊತ್ತಾಗಲಿ. ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಮುಂದೇನು ಮಾಡಬೇಕು ಎಂಬುದನ್ನು ತಮ್ಮೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಅಂತಹ ಪರಿಸ್ಥಿತಿ ಬರುವುದಿಲ್ಲ ಎಂಬ ನಂಬಿಕೆ ಇದೆ. ಕಾದು ನೋಡೋಣ ಎಂದರು.
ನನಗೆ ಟಿಕೆಟ್ ಸಿಗುವುದು ಹುಬ್ಬಳ್ಳಿ – ಧಾರವಾಡ ಜನರ ಸ್ವಾಭಿಮಾನದ ಪ್ರಶ್ನೆ. ಇದಕ್ಕೆ ಪಕ್ಷದ ಹೈ ಕಮಾಂಡ್ ಗೌರವ ಕೊಡುವ ವಿಶ್ವಾಸವಿದೆ. ಹೀಗಾಗಿ ಹೋಪ್ಸ್ ಕಳೆದುಕೊಂಡಿಲ್ಲ ಎಂದು ಹೇಳಿದರು.
ಎಲ್ಲರಿಗೂ ಗೌರವ
ಟಿಕೆಟ್ ವಿಚಾರದಲ್ಲಿ ನಾವು ಯಾರನ್ನೂ ಟೀಕೆ ಮಾಡುವುದು ಬೇಡ. ದೂಷಣೆ ಮಾಡುವುದು ಸರಿಯಲ್ಲ. ಮೋದಿಯವರಿಗೆ, ಅಮಿತ್ ಶಾ ಅವರಿಗೆ, ನಡ್ಡಾ ಅವರಿಗೆ ಗೌರವ ಕೊಡೋಣ ಎಂದರು.