ಘಟಬಂದನ್ ಮುಖಂಡರ ನಿಲುವಿಗೆ ದಲಿತ ಸಂಘಟನೆಗಳ ವಿರೋಧ

Advertisement

ಕೋಲಾರ: ಘಟಬಂದನ್ ಮುಖಂಡರು ಮತ್ತು ಕೆಲ ದಲಿತ ಮುಖಂಡರು ಒಗ್ಗೂಡಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ದಲಿತ ವಿರೋಧಿಯಾಗಿದ್ದು ಚುನಾವಣೆಯಲ್ಲಿ ಇದಕ್ಕೆ ತಕ್ಕ ಪಾಠ ಕಲಿಸಲು ದಲಿತ ಸಂಘಟನೆಗಳ ಮುಖಂಡರು ನಿರ್ಧರಿಸಿದರು.
ಕೋಲಾರದ ಕುವೆಂಪು ನಗರದ ರೈತ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಮಹತ್ವದ ಸಭೆಯಲ್ಲಿ ೬೦ ಮಂದಿ ಮುಖಂಡರು ಭಾಗವಹಿಸಿದ್ದು, ಘಟಬಂಧನ್ ತಂಡದವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದು ನಾನೇ ಸೋಲಿಸಿದ್ದು ಎಂದು ಕೆಲವರು ಸಂಭ್ರಮಾಚರಣೆ ನಡೆಸಿದ್ದು ಜಗಜ್ಜಾಹೀರು ಆಗಿರುವಾಗ ಇದೀಗ ಅದೇ ತಂಡದವರು ದಲಿತ ಜನಾಂಗದ ಪರವಾಗಿ ನಿಲುವುಗಳನ್ನು ಕೈಗೊಳ್ಳುತ್ತಿರುವುದು ಸಮಂಜಸವಲ್ಲವೆಂದು ದೂರಿದರು.
ಇದೀಗ ಅದೇ ಘಟಬಂದನ್ ಮುಖಂಡರು ಕೆಲ ದಲಿತ ಮುಖಂಡರೊಡನೆ ಕೈ ಜೋಡಿಸಿ ತಾವು ಹೇಳಿದ್ದೆ ಅಂತಿಮ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ರಾಜಕಾರಣವನ್ನು ಕಲುಷಿತ ಮಾಡುವ ಮೂಲಕ ಏಕಚಕ್ರಾಧಿಪತ್ಯ ಸ್ಥಾಪಿಸಲು ಮುಂದಾಗಿದ್ದು ಇದಕ್ಕೆ ಅವಕಾಶ ನೀಡಬಾರದು. ಎಸ್ಸಿ, ಎಸ್ಟಿ ಓಟುಗಳು ಕೆಲವರ ಜೇಬಿನಲ್ಲಿದೆ ಎಂಬಂತೆ ಆಡುತ್ತಿದ್ದು ಅಹಿಂದ ಮತದಾರರು ದಡ್ಡರು ಎಂಬಂತೆ ಅವರ ಪರವಾಗಿ ಘಟಬಂದನ್ ತಂಡದವರು ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಇಡೀ ಅಹಿಂದ ವರ್ಗಕ್ಕೆ ಅಪಮಾನ ಮಾಡುತ್ತಿದ್ದು ಈ ಮೂಲಕ ದಲಿತರಿಗೆ ಸವಾಲು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಘಟಬಂದನ್ ಮುಖಂಡರು ಹೇಳಿದಂತೆ ದಲಿತರು ಜೆಡಿಎಸ್-ಕಾಂಗ್ರೆಸ್-ಬಿಜೆಪಿಗೆ ಮತ ಹಾಕಿದ್ದು ಇವರಿಂದ ಜನಾಂಗಕ್ಕೆ ಏನು ಲಾಭವಾಗಿದೆ? ನಾವು ಹೇಳಿದ್ದೇ ಅಂತಿಮ ಎಂಬಂತೆ ಭಂಡಧೈರ್ಯ ತೋರುತ್ತಿರುವ ಮುಖಂಡರನ್ನು ಬಹಿಷ್ಕರಿಸುವ ಸಂಬಂಧ ಫೆಬ್ರವರಿ ೩ ರಂದು ಮತ್ತೊಂದು ಸಭೆ ನಡೆಸುವ ಮೂಲಕ ಘಟಬಂದನ್ ಗೆ ಕಡಿವಾಣ ಹಾಕಲು ಮತ್ತು ಚುನಾವಣೆ ಸಂಬಂಧಿಸಿದಂತೆ ಚರ್ಚಿಸಲು ದಲಿತ ಸಂಘಟನೆಗಳ ಮುಖಂಡರು ನಿರ್ಧಾರಿಸಲಾಯಿತು. ಇಂತಿ ದಲಿತ ಮುಖಂಡರು ಕೋಲಾರ ಜಿಲ್ಲೆ.