ಕೇರಳದ ಕೋಝಿಕ್ಕೋಡದ ಫಾತಿಮಾ ಅಸ್ಲಾರವರು ವೈದ್ಯಕೀಯ ಶಿಕ್ಷಣಕ್ಕೆ ಅನರ್ಹ ಎಂದು ಪರಿಗಣಿಸಲ್ಟಟ್ಟರೂ, ಛಲದಿಂದ ವೈದ್ಯೆಯಾಗುವ ಮೂಲಕ ಸಮಾಜಕ್ಕೇ ಮಾದರಿಯಾಗಿದ್ದಾರೆ. ಅಸ್ಲಾ ಗಾಲಿಕುರ್ಚಿಯಲ್ಲಿ ಇಡೀ ಪ್ರಪಂಚದೊಂದಿಗೆ ಸಂವಹನ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ.
ಅಬ್ದುಲ್‌ನಾಸರ್ ಮತ್ತು ಅಮಿನಾ ವಟ್ಟಿಕುನ್ನುಮ್ಮಲ್ ಪೂನೂರ ದಂಪತಿಯ ಪುತ್ರಿ ಫಾತಿಮಾಗೆ ಮೂರು ದಿನಗಳ ಮಗುವಿದ್ದಾಗಲೇ ಮೂಳೆ ಮುರಿತ ಕಾಯಿಲೆ ಇದೆ ಎನ್ನುವುದು ದೃಢಪಟ್ಟಿತ್ತು. ಫಾತಿಮಾಳನ್ನು ಬೆಳೆಸಲು ಆಕೆಯ ಪೋಷಕರು ಮತ್ತು ಸಹೋದರ ಬಹಳಷ್ಟು ಕಷ್ಟಗಳನ್ನು ಅನುಭವಿಸಿದರು. ಅಕೆಯ ತಾಯಿ ಅಮಿನಾ ಮಗಳನ್ನು ಪ್ರತಿದಿನ ಪುನೂರಿನ ಸರ್ಕಾರಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಫಾತಿಮಾ ಮೂಳೆಕಾಯಿಲೆಯ ವಿರುದ್ಧ ಹೋರಾಡುತ್ತಾ ಇತರ ಮಕ್ಕಳಂತೆ ಕಲಿತರು. ಫಾತಿಮಾ ೧೦ನೆಯ ತರಗತಿಯಲ್ಲಿ ಶೇ. ೯೦ ಅಂಕ ಪಡೆದರು. ೧೧ನೇ ತರಗತಿಯಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಳ್ಳಲು ಇಚ್ಛಿಸಿದಾಗ ಅನೇಕರು ಈ ವಿಷಯವನ್ನು ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು. ವಿಜ್ಞಾನದ ಪ್ರಾಯೋಗಿಕ ತರಗತಿಗಳಲ್ಲಿ ಗಾಲಿ ಕುರ್ಚಿಯಲ್ಲಿ ಕುಳಿತುಕೊಳ್ಳುವದರಿಂದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಆದರೆ ಫಾತಿಮಾ ವಿಜ್ಞಾನವನ್ನು ತೆಗೆದುಕೊಂಡು ಮುಂದೆ ವೈದ್ಯೆಯಾಗುವ ಕನಸನ್ನು ಕಂಡಿದ್ದಳು. ಹಾಗೆಯೇ ನಿರ್ಧರಿಸಿ ವಿಜ್ಞಾನದ ಕಾಲೇಜಿಗೆ ಸೇರಿದರು. ಅನಾರೋಗ್ಯದ ಕಾರಣ ಫಾತಿಮಾ ಅವರಿಗೆ ಓದುವದು ಅಷ್ಟು ಸುಲಭವಾಗಿರಲಿಲ್ಲ. ೧೨ನೇ ತರಗತಿಯ ಸಮಯದಲ್ಲಿ ಅವರು ಹಲವಾರು ಬಾರಿ ಅನಾರೋಗ್ಯಕ್ಕೆ ಒಳಗಾದರು. ಆದರೂ ಸತತ ಪ್ರಯತ್ನದಿಂದ ಪರೀಕ್ಷೆಯಲ್ಲಿ ಶೇ.೮೫ ಅಂಕ ಪಡೆದರು. ಇದೂವರೆಗೆ ಫಾತಿಮಾ ಅವರು ಮೂರು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಹೆತ್ತವರು ಮತ್ತು ಒಡಹುಟ್ಟಿದವರು ವೈದ್ಯಕೀಯ ವಿಜ್ಞಾನ ಓದಲು ಸಂಪೂರ್ಣ ಬೆಂಬಲ ನೀಡಿದರು. ದೈಹಿಕ ವ್ಯತ್ಯಾಸಗಳಿಂದಾಗಿ ಅಸ್ಲಾ ಅವರು ವೈದ್ಯಕೀಯ ಮಂಡಳಿಯ ಪ್ರವೇಶ ಪರೀಕ್ಷೆಯನ್ನು ಎರಡು-ಮೂರು ಬಾರಿ ಎದುರಿಸಿದರು. ನಂತರ ಫಾತಿಮಾ ಕೊಟ್ಟಾಯಂನ ಎಎನ್‌ಎಸ್‌ಎಸ್ ಹೋಮಿಯೋ ವೈದ್ಯಕೀಯ ಕಾಲೇಜಿಗೆ ಸೇರಿದರು. ಕಾಂತಪುರಂನ ಎ.ಪಿ.ಅಬೂಬ್ಕರ ಮುಜಲಿಯಾರ್ ಮತ್ತು ಮರ್ಕಝ ಅವರಿಂದ ಫಾತಿಮಾರಿಗೆ ಚಿಕಿತ್ಸೆ ಮತ್ತು ಅಧ್ಯಯನಕ್ಕಾಗಿ ಸಹಾಯ ಒದಗಿಬಂತು. ಅವರು ಹೋಮಿಯೋಪತಿ ವೈದ್ಯರಾಗಿ ಕೋರ್ಸನ್ನು ಪೂರ್ಣಗೊಳಿಸಿದರು.
ಫಾತಿಮಾಗೆ ಪಾತು ಎಂದು ಪ್ರೀತಿಯಿಂದ ಕರೆಯುತ್ತಾರೆ. ಫಾತಿಮಾ ಶೇ.೬೫ರಷ್ಟು ಅಂಗವೈಕಲ್ಯ ಹೊಂದಿದ್ದು, ಅವರು ಈಗ ವಾಕರ್ ಸಹಾಯದಿಂದ ಸ್ವಲ್ಪ ದೂರ ನಡೆಯಬಲ್ಲರು. ಅವರು `ನಿಲವು ಪೋಲೆ ಚಿರಿಕ್ಕುನ್ನ ಪೆಂಕುಟ್ಟಿ’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದು ಒಂದು ವಿಭಿನ್ನ ಸಾಮರ್ಥ್ಯದ ವ್ಯಕ್ತಿಯಾಗಿ ತನ್ನ ಜೀವನವನ್ನು ತೆರೆದಿಡುವ ಆತ್ಮಚರಿತ್ರೆಯಾಗಿದೆ. ಫಾತಿಮಾರವರ ಆತ್ಮಚರಿತ್ರೆ ೨೦೨೦ರಲ್ಲಿ ಬಿಡುಗಡೆಯಾಗಿದ್ದು, ಕೇರಳದಲ್ಲಿ ಅತೀ ಹೆಚ್ಚು ಮಾರಾಟವಾಗಿದೆ. ಅವರು ಲಕ್ಷದ್ವೀಪದ ಡಿಜಿಟಲ್ ಕಲಾವಿದ ಫಿರೋಜ್ ನೆಡಿಯಾತ್ ಅವರನ್ನು ಭೇಟಿಯಾದರು. ಫಿರೋಜರವರ ನಡೆನುಡಿಗಳು ಮತ್ತು ವ್ಯಕ್ತಿತ್ವದಿಂದ ಆಸ್ಲಾರವರು ಆಕರ್ಷಿತರಾದರು. ನಂತರ ೨೦೨೧ರಲ್ಲಿ ಕಲಾವಿದ ಫಿರೋಜರವರನ್ನು ವಿವಾಹವಾಗಿದ್ದಾರೆ. ಫಾತಿಮಾರವರು ‘ಡ್ರೀಮ್ ಬಿಯಾಂಡ್ ಇನ್ಫಿನಿಟಿ’ ಎಂಬ ಯೂಟ್ಯೂಬ್ ಚಾನೆಲ್‌ನ್ನು ಪತಿಯೊಂದಿಗೆ ಸೇರಿ ಪ್ರಾರಂಭಿಸಿದ್ದಾರೆ. ಇದು ಅವರ ಪ್ರಯಾಣದ ಬ್ಲಾಗ್‌ಗಳು ಸಮಾಜದ ಸೌಲಭ್ಯಗಳನ್ನು ಅಂಗವಿಕಲರಿಗೆ ಸ್ನೇಹಿಯನ್ನಾಗಿ ಮಾಡುವಲ್ಲಿ ಮಾರ್ಗದರ್ಶಿಯಾಗಿದೆ.
– ಸುರೇಶ ಗುದಗನವರ, ರಾಮದುರ್ಗ