ಮಂಗಳೂರು: ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಹಾಗೂ ಕೇರಳ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಪಿಕ್‌ಅಪ್ ವಾಹನವೊಂದರಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.
ಅವರು ನ.೧೮ ರಂದು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ನ.೧೭ ರಂದು ಗಾಂಜಾ ಸಾಗಾಟ ಮಾಡುತ್ತಿದ್ದ ಪಿಕ್‌ಅಪ್ ಹಾಗೂ ಬೆಂಗಾವಲು ಕಾರನ್ನು ಪತ್ತೆ ಹಚ್ಚಿ ೧೩೨ ಕೆ.ಜಿ. ಗಾಂಜಾವನ್ನು ಮಂಗಳೂರು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದರು.
ವಶಕ್ಕೆ ಪಡೆದ ಆರೋಪಿಗಳನ್ನು ಬಂಟ್ವಾಳದ ನಿವಾಸಿ ರಮೀಝ್ ರಾಝ್ (೩೦) ಹಾಗೂ ಮಂಜೇಶ್ವರದ ನಿವಾಸಿ ಅಬ್ದುಲ್ ಖಾದರ್ ಹ್ಯಾರಿಸ್ (೩೧) ಎಂದು ಗುರುತಿಸಲಾಗಿದ್ದು, ಅವರಿಂದ ೧೩೨ ಕೆ.ಜಿ. ಗಾಂಜಾ, ನಾಲ್ಕು ಮಾರಕಾಯುಧ, ಕಾರನ್ನು ವಶಪಡಿಸಿಕೊಂಡಿದ್ದು, ಒಟ್ಟು ೩೯ ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರಕ್ಕೆ ಬೆಂಗಳೂರಿನಿಂದ ಪಿಕ್‌ಅಪ್ ವಾಹನವೊಂದರಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ಜೆಪ್ಪಿನಮೊಗರು ಬಳಿ ಪತ್ತೆ ಹಚ್ಚಿಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಆರೋಪಿಗಳು ಆಂದ್ರಪ್ರದೇಶದ ವಿಶಾಖಪಟ್ಟಣದಿಂದ ಅರಣ್ಯದ ಮಧ್ಯದಲ್ಲಿ ಬೆಳೆಯುವ ಗಾಂಜಾವನ್ನು ತರುತ್ತಿದ್ದು, ಇದು ಉಳ್ಳಾಲ, ಕೊಣಾಜೆ ಹಾಗೂ ಕಂಕನಾಡಿ ಠಾಣಾ ವ್ಯಪ್ತಿಯಲ್ಲಿ ಹೆಚ್ಚಾಗಿ ವಿತರಣೆಯಾಗುತ್ತಿದ್ದು, ಈಗಾಗಲೇ ತನಿಖೆಯನ್ನು ನಡೆಸುತ್ತಿದ್ದು, ಇದಕ್ಕಿಂತ ಹಿಂದೆ ಮೂರು-ನಾಲ್ಕು ಬಾರಿ ಗಾಂಜಾವನ್ನು ತಂದಿದ್ದು, ಬರುವಾಗ ದಾರಿಯ ಮಧ್ಯದಲ್ಲಿ ಸ್ವಲ್ಪ ಗಾಂಜಾವನ್ನು ನೀಡಿರುವುದಾಗಿ ತಿಳಿದುಬಂದಿದ್ದು, ಈ ಪ್ರಕರಣದಲ್ಲಿ ಹೆಚ್ಚಿನವರು ಬಾಗಿಯಾಗಿದ್ದು, ಆದಷ್ಟು ಬೇಗ ಎಲ್ಲರನ್ನೂ ಬಂಧಿಸಲಾಗುವುದು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.
ಆರೋಪಿಗಳ ಪೈಕಿ ರಮೀಝ್ ರಾಝ್ ಮೇಲೆ ಆರು ಪ್ರಕರಣ ಹಾಗೂ ಅಬ್ದುಲ್ ಖಾದರ್ ಹ್ಯಾರಿಸ್ ಮೇಲೆ ಮಂಗಳೂರಿನಲ್ಲಿ ಮೂರು ಹಾಗೂ ಕಾಸರಗೋಡಿನಲ್ಲಿ ಒಂದು ಪ್ರಕರಣ ದಾಖಲಾಗಿರುವುದಾಗಿ ತಿಳಿಸಿದರು.
ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಅರುಣಾಂಶುಗಿರಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಎ ಗಾಂವ್ಕರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕ್, ಎಕಾನಾಮಿಕ್ ಮತ್ತು ನಾರ್ಕೋಟಿಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮಕೃಷ್ಣ ಹಾಗೂ ಸಿಸಿಬಿ ಘಟಕದ ಪಿಎಸ್‌ಐ ಕಬ್ಬಾಳ್ ರಾಜ್ ಹೆಚ್.ಡಿ., ಪ್ರದೀಪ್ ಟಿ.ಆರ್. ಮತ್ತು ಸಿಸಿಬಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಶಶಿಕುಮಾರ್ ತಿಳಿಸಿದರು.