ದಾವಣಗೆರೆ: ಗರ್ಭಿಣಿ ಪತ್ನಿಯನ್ನೇ ಕೊಲೆ ಮಾಡಿ, ಅರಣ್ಯದಲ್ಲಿ ಹೂತು ಹಾಕಿದ್ದ ಪ್ರಕರಣವನ್ನು ಚನ್ನಗಿರಿ ಪೊಲೀಸರು ಬೇಧಿಸಿ, ಆರೋಪಿ ಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಐಗೂರು ಗ್ರಾಮದ ಚಂದ್ರಕಲಾ ಅಲಿಯಾಸ್ ರಶ್ಮಿ(20) ಪತಿಯಿಂದಲೇ ಕೊಲೆಯಾದ ಗರ್ಭಿಣಿ. ಚನ್ನಗಿರಿ ತಾ. ಗಂಗಗೊಂಡನಹಳ್ಳಿ ಗ್ರಾಮದ ಮನು ಅಲಿಯಾಸ್ ಮೋಹನ್ ಅಲಿಯಾಸ್ ಮೋಹನ ಕುಮಾರ್(27)ಗೆ ಚಂದ್ರಕಲಾಳನ್ನು ಕಳೆದ ಏ.14ರಂದು ಕೊಟ್ಟು ಮದುವೆ ಮಾಡಲಾಗಿತ್ತು. ಚಂದ್ರಕಲಾ ತಿಂಗಳ ಗರ್ಭಿಣಿಯಾಗಿದ್ದು, ಗರ್ಭಿಣಿಯಾದ ನಂತರ ಚಂದ್ರಕಲಾಗೆ ಗಂಡನ ಮನೆಯಲ್ಲಿ ಚಿತ್ರಹಿಂಸೆ ನೀಡಲಾರಂಭಿಸಿದ್ದರು.
43 ದಿನಗಳ ಹಿಂದೆ ಚಂದ್ರಕಲಾ ಗರ್ಭಿಣಿ ಚಂದ್ರಕಲಾ ನಾಪತ್ತೆಯಾಗಿದ್ದಳು. ಆಕೆಯ ಗಂಡ ಮನು ಅಲಿಯಾಸ್ ಮೋಹನ ಹಾಗೂ ಚಂದ್ರಕಲಾ ಕುಟುಂಬದವರರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದನು. ಚಂದ್ರಕಲಾ ತವರು ಮನೆಯವರೂ ಮಗಳು ನಾಪತ್ತೆಯಾಗಿದ್ದರಿಂದ ತೀವ್ರ ಆತಂಕಗೊಂಡು, ಎಲ್ಲಾ ಕಡೆಗೂ ವಿಚಾರ ಮಾಡಿದ್ದರೂ ಆಕೆಯ ಸುಳಿವು ಸಿಕ್ಕಿರಲಿಲ್ಲ.
ಮೋಹನನ ಮೇಲೆ ಚಂದ್ರಕಲಾ ಕುಟುಂಬಕ್ಕೆ ಅನುಮಾನ ಬಂದು, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ವೇಳೆ ಮೋಹನಕುಮಾರ, ಆತನ ತಂದೆ, ತಾಯಿ ಹಾಗೂ ಅಕ್ಕ ನ್ಯಾಯಾಲಯಕ್ಕೆ ಬೇಲ್ ಅರ್ಜಿ ಸಲ್ಲಿಸಿದ್ದು, ಬೇಲ್‌ಗೆ ಸಹಿ ಹಾಕಲು ಬಂದಾಗ ಪೊಲೀಸರು ಮೋಹನನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನೇ ಚಂದ್ರಕಲಾಳನ್ನು ಕೊಂದ ವಿಚಾರ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.
ಮದುವೆಯಾದ ಕೆಲ ದಿನಗಳವರೆಗೆ ಪತ್ನಿ ಚಂದ್ರಕಲಾ ಜೊತೆಗೆ ಚನ್ನಾಗಿಯೇ ಇದ್ದ ಪತಿ ಹಾಗೂ ಅವರ ಕುಟುಂಬ ವರ್ಗದವರು ಈಚೆಗೆ ಹಿಂಸೆ ನೀಡುತ್ತಿದ್ದಾರೆ. ಚಿತ್ರಹಿಂಸೆ ತಾಳಲಾಗುತ್ತಿಲ್ಲವೆಂದು ಚಂದ್ರಕಲಾ ತನ್ನ ಅಕ್ಕಂದಿರಿಗೆ ಫೋನ್ ಮಾಡಿ ಹೇಳಿದ್ದಳು. ಆಕೆ ಅಕ್ಕ ಬುದ್ಧಿ ಮಾತು ಸಹ ಹೇಳಿದ್ದರು.
ಮೋಹನ ಅ.9ರಂದು ಚಂದ್ರಕಲಾ ಉಸಿರು ಕಟ್ಟಿಸಿ, ಸಾಯಿಸಿದ ಮನು 15 ಕಿಮೀ ದೂರದ ಶಿರಗಲಿಪುರದ ಕಣಿವೆ ಭದ್ರಾ ಅಭಯಾರಣ್ಯದ ಹಳ್ಳದಲ್ಲಿ ಮೃತದೇಹ ಬಿಸಾಕಿದ್ದ. ಅ.10ರಂದು ಚಂದ್ರಕಲಾ ನಾಪತ್ತೆ ಬಗ್ಗೆ ತವರು ಮನೆಯವರ ಜೊತೆ ಠಾಣೆಗೆ ಹೋಗಿ ದೂರು ಕೊಟ್ಟು, ಆಕೆಯ ಹುಡುಕುವ ನಾಟಕ ಮಾಡಿದ್ದಾನೆ. ವಿಧಿ ಪ್ರಯೋಗಾಲಯದ ತಜ್ಞರು, ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ಸ್ಥಳದಲ್ಲಿದ್ದ ಚಂದ್ರಕಲಾ ಹೆತ್ತವರು, ಕುಟುಂಬ ವರ್ಗದ ಆಕ್ರಂದನ ಮುಗಿಲು ಮುಟ್ಟಿತ್ತು. ಆರು ತಿಂಗಳ ಗರ್ಭಿಣಿಯನ್ನು ಅಮಾನುಷವಾಗಿ ಕೊಂದ ಮೋಹನನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಪಟ್ಟು ಹಿಡಿದರು.