ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬೆಂಗಳೂರು- ಬೆಳಗಾವಿಗೆ ವಿಶೇಷ ರೈಲು

Advertisement

ಹುಬ್ಬಳ್ಳಿ: ನೈಋತ್ಯ ರೈಲ್ವೆಯು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಬೆಳಗಾವಿಗೆ ಆಗಸ್ಟ್ ೩೦ರಿಂದ ಸೆಪ್ಟೆಂಬರ್ ೪ರವರೆಗೆ ಪ್ರತಿ ದಿನ `ಒಂದು ಟ್ರಿಪ್’ ಸೂಪರ್ ಫಾಸ್ಟ್ ಸ್ಪೆಷಲ್ ಎಕ್ಸಪ್ರೆಸ್ ವಿಶೇಷ ರೈಲು ಸಂಚಾರ ವ್ಯವಸ್ಥೆ ಮಾಡಿದೆ.
ಪ್ರತಿ ದಿನ ರಾತ್ರಿ ೯.೩೦ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟು ಬೆಳಿಗ್ಗೆ ೮.೨೫ಕ್ಕೆ ಬೆಳಗಾವಿ ತಲುಪಲಿದೆ. ಬೆಳಿಗ್ಗೆ ೫.೧೫ಕ್ಕೆ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರೆ ೫.೫೦ಕ್ಕೆ ಧಾರವಾಡ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.
ಈ ರೈಲು ಒಂದು ಎಸಿ ಟು ಟೈಯರ್ ಕೋಚ್, ಎರಡು ಎಸಿ ತ್ರಿ ಟೈಯರ್ ಕೋಚ್, ೧೨ ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್, ಎರಡು ಜನರಲ್ ಸೆಕೆಂಡ್ ಕ್ಲಾಸ್ ಕೋಚ್ ಮತ್ತು ಎರಡು ಲಗೇಜ್ ಕಂ ಬ್ರೇಕ್ ವ್ಯಾನ್ಸ್ ಒಳಗೊಂಡಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಏಕಕಾಲಕ್ಕೆ ಕಂಡು ಬರುವ ಪ್ರಯಾಣಿಕರ ದಟ್ಟಣೆ ನಿಯಂತ್ರಣ ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.